
ಉಡುಪಿ, ಆ. 3: ಲಯನ್ಸ್ ಜಿಲ್ಲೆ 317Cರ 2026–27ನೇ ಸಾಲಿನ ನೂತನ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭವು ಆಗಸ್ಟ್ 8ರಂದು ಸಂಜೆ 4.30ಕ್ಕೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ಸಾವಿರಕ್ಕೂ ಅಧಿಕ ಲಯನ್ಸ್ ಸದಸ್ಯರು, ಪದಾಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು ಪ್ರಥಮ ಮಹಿಳೆ ಲಯನ್ ವೀಣಾ ಆರ್. ಕೋಟ್ಯಾನ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ. ಮಾಜಿ ಅಂತರರಾಷ್ಟ್ರೀಯ ನಿರ್ದೇಶಕ ಹಾಗೂ ನಾಯಕತ್ವ ತರಬೇತುದಾರ ಪಂಕಜ್ ಮೆಹ್ರಾ ಪದಗ್ರಹಣ ಅಧಿಕಾರಿಯಾಗಿ ನೂತನ ಜಿಲ್ಲಾ ಸಂಪುಟಕ್ಕೆ ಅಧಿಕಾರ ಪ್ರಮಾಣ ವಚನ ಬೋಧಿಸಲಿದ್ದಾರೆ.
ಮಾಜಿ ಅಂತರರಾಷ್ಟ್ರೀಯ ನಿರ್ದೇಶಕರಾದ ವಂಶಿಧರ್ ಬಾಬು ಮತ್ತು ಕೃಷ್ಣ ರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಅಶ್ವತ್ ನಾರಾಯಣ್ ಹಾಗೂ ರಾಮಚಂದ್ರನ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಇಂಜಿನಿಯರ್ ರಮಾನಂದ ಕೆ., ಸಂಪುಟ ಕಾರ್ಯದರ್ಶಿ ಸದಾನಂದ ನಾವಡ, ಕೋಶಾಧಿಕಾರಿ ವಿನೋದ್ ನಾರಾಯಣ ಸೇರಿದಂತೆ ಜಿಲ್ಲಾ ಸಂಪುಟದ ನೂತನ ಪದಾಧಿಕಾರಿಗಳು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕುಂದಾಪುರ ಸಿಟಿ ಸೆಂಟರ್ ಲಯನ್ಸ್ ಕ್ಲಬ್ ಆತಿಥ್ಯ ವಹಿಸಿರುವ ಈ ಸಮಾರಂಭವು ಜಿಲ್ಲೆಯ ಲಯನ್ಸ್ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವ ಮಹತ್ವದ ಘಟ್ಟವಾಗಲಿದೆ. ಮಾಜಿ ಜಿಲ್ಲಾ ಗವರ್ನರ್‌ಗಳು, ವಲಯ ಹಾಗೂ ಪ್ರಾಂತ್ಯ ಅಧ್ಯಕ್ಷರು, ವಿವಿಧ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಮತ್ತು ಹಿರಿಯ ಲಯನ್ಸ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
2026–27ನೇ ಸಾಲಿನಲ್ಲಿ ಜಿಲ್ಲೆ ಕೈಗೊಳ್ಳಲಿರುವ ಪ್ರಮುಖ ಸೇವಾ ಯೋಜನೆಗಳನ್ನು ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಪ್ರಕಟಿಸಿದ್ದಾರೆ. ಜಿಲ್ಲೆಯಾದ್ಯಂತ 10,000 ಯೂನಿಟ್ ರಕ್ತ ಸಂಗ್ರಹ, 10,000 ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ, ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬೆಂಬಲ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ವಿವಿಧ ಸೇವಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎರಡು ಲಕ್ಷಕ್ಕೂ ಅಧಿಕ ಜನರಿಗೆ ನೆರವು ನೀಡುವ ಗುರಿ ಹೊಂದಲಾಗಿದೆ.
ಸದಸ್ಯತ್ವ ವೃದ್ಧಿ, ಹೊಸ ಲಯನ್ಸ್ ಕ್ಲಬ್‌ಗಳ ಸ್ಥಾಪನೆ, ಯುವಜನರನ್ನು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ನಾಯಕತ್ವ ಬೆಳೆಸುವ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಜಿಲ್ಲೆಯಾದ್ಯಂತ ಕ್ಲಬ್‌ಗಳ ಸಹಕಾರದೊಂದಿಗೆ ಶಾಶ್ವತ ಮತ್ತು ಪರಿಣಾಮಕಾರಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಸಂಕಲ್ಪವನ್ನು ನೂತನ ಜಿಲ್ಲಾ ಆಡಳಿತ ಹೊಂದಿದೆ.ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇದು ಲಯನ್ಸ್ ಜಿಲ್ಲೆ 317Cರ ಹೊಸ ಸೇವಾ ವರ್ಷದ ಆರಂಭವನ್ನು ಸೂಚಿಸುವ ಮಹತ್ವದ ಸಮಾರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಈ ಕುರಿತು ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಪದಗ್ರಹಣ ಸಮಿತಿ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶ್ ಚಂದ್ರ, ಸಂಪುಟ ಕಾರ್ಯದರ್ಶಿ ಸದಾನಂದ ನಾವಡ ಸೇರಿದಂತೆ ಜಿಲ್ಲಾ ಲಯನ್ಸ್‌ನ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now