ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್‌ ಆರೋಪ: ಮಹಿಳೆ ಬಂಧನ

ಉದ್ಯಮಿಗೆ 70 ಲಕ್ಷ ರೂ. ವಂಚನೆ, ಬ್ಲ್ಯಾಕ್‌ಮೇಲ್‌ ಆರೋಪ: ಮಹಿಳೆ ಬಂಧನ
0Shares

ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ 70 ಲಕ್ಷ ವಂಚನೆ ನಡೆಸಿದ ಆರೋಪದ ಜೊತೆಗೆ ಬ್ಲ್ಯಾಕ್‌ಮೇಲ್ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಡುಬಿದ್ರೆಯ ಕಂಚಿನಡ್ಕದಲ್ಲಿ ಜೀನತ್ ಇಬ್ರಾಹಿಂ ಬಂಧಿತ ಮಹಿಳೆ. ಉಡುಪಿ ಮೂಲದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಜೀನತ್ ಇಬ್ರಾಹಿಂ ಅವರನ್ನು ಬಂಧಿಸಲಾಗಿದೆ. ಉಡುಪಿ ಮೂಲದ ವ್ಯಕ್ತಿ ಹಾಗೂ ಜೀನತ್ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು. ಹೂಡಿಕೆ ಉದ್ದೇಶದಿಂದ ದೂರುದಾರರು ಆರೋಪಿತೆಗೆ 70 ಲಕ್ಷ ರೂ. ನೀಡಿದ್ದರು. ಆ ಹಣವನ್ನು ಜಮೀನು ಖರೀದಿಗೆ ಬಳಸದೆ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚನೆ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ದೂರುದಾರರು ಕಚೇರಿ ಮುಚ್ಚುವ ವೇಳೆ ಕೆಲವು ರಹಸ್ಯ ದಾಖಲೆಗಳು ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದು, ಅದರಲ್ಲಿ ಹಲವರ ಖಾಸಗಿ ಹಾಗೂ ಅಶ್ಲೀಲ ಫೋಟೋ ಮತ್ತು ವಿಡಿಯೋಗಳಿರುವುದನ್ನು ಕಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿತೆ ಹೊಸ ಕಚೇರಿಗೆ ಬಂದು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ, ಖಾಸಗಿ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಹಾಗೂ ದೂರುದಾರರ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಕೃತ್ಯದಲ್ಲಿ ಸಬೀನಾ ಇಲಿಯಾಸ್ ಸೇರಿದಂತೆ ಇತರರು ಸಹ ಭಾಗಿಯಾಗಿದ್ದು, ಅಕ್ರಮವಾಗಿ ಹಣ ವಸೂಲಿ ಮಾಡುವ ಜಾಲ ನಡೆಸುತ್ತಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಈ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಗರ ಠಾಣೆಯ ಪ್ರಭಾರ ಎಸ್‌ಐ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಭರತೇಶ್‌ ಕಂಕಣವಾಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ರೀತಿಯಲ್ಲಿ ಮೋಸ ಅಥವಾ ವಂಚನೆಗೆ ಒಳಗಾಗಿರುವವರು ಇದ್ದಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now