ಬಂಟ್ವಾಳ: ಗೃಹ ಲಕ್ಷ್ಮಿ ಹಣ ಉಳಿತಾಯ ಮಾಡಿ ಸ್ವಂತ ಬಟ್ಟೆ ಅಂಗಡಿ ಆರಂಭಿಸಿದ ಮಹಿಳೆ..ಶ್ರೀ ದುರ್ಗಾ ಗೃಹಲಕ್ಷ್ಮಿ

ಬಂಟ್ವಾಳ: ಗೃಹ ಲಕ್ಷ್ಮಿ ಹಣ ಉಳಿತಾಯ ಮಾಡಿ ಸ್ವಂತ ಬಟ್ಟೆ ಅಂಗಡಿ ಆರಂಭಿಸಿದ ಮಹಿಳೆ..ಶ್ರೀ ದುರ್ಗಾ ಗೃಹಲಕ್ಷ್ಮಿ
0Shares

ಬಂಟ್ವಾಳ, ಅ.18 ಪ್ರತಿ ತಿಂಗಳು ಸಿಗುವ 2,000 ರೂಪಾಯಿ ದೊಡ್ಡ ಮೊತ್ತವೆನಿಸಲಿಕ್ಕಿಲ್ಲ. ಆದರೆ ಅದನ್ನು ಖರ್ಚು ಮಾಡದೆ ಮೂರು ವರ್ಷಗಳ ಕಾಲ ನಿರಂತರವಾಗಿ ಉಳಿತಾಯ ಮಾಡಿದಾಗ, ಅದು ಒಂದು ಕನಸಿಗೆ ಬುನಾದಿಯಾಯಿತು. ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಶಕುಂತಲಾ ಅವರಿಗೆ ಕರ್ನಾಟಕ ಸರ್ಕಾರದ ‘ಗೃಹ ಲಕ್ಷ್ಮಿ’ ಯೋಜನೆಯು ಸ್ವಾವಲಂಬನೆಯ ಹಾದಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಶಕುಂತಲಾ ಅವರು, ಕಳೆದ ಮೂರು ವರ್ಷಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಪಡೆದ ಹಣದಿಂದ ಒಟ್ಟು 72,000 ರೂಪಾಯಿಗಳನ್ನು ಉಳಿತಾಯ ಮಾಡಿದರು. ಸ್ವಂತ ವ್ಯಾಪಾರ ಆರಂಭಿಸುವ ಕನಸಿನೊಂದಿಗೆ, ಈ ಉಳಿತಾಯದ ಮೊತ್ತ ಹಾಗೂ ಕುಟುಂಬದ ಉಳಿತಾಯವನ್ನು ಸೇರಿಸಿ ಒಟ್ಟು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್ಸ್ & ಗಾರ್ಮೆಂಟ್ಸ್’ ಅನ್ನು ಸ್ಥಾಪಿಸಿದ್ದಾರೆ. ಈ ಅಂಗಡಿಯಲ್ಲಿ ಎರಡು ಹೊಲಿಗೆ ಯಂತ್ರಗಳನ್ನು ಅಳವಡಿಸಲಾಗಿದೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗುರುವಾರದಂದು ಈ ನೂತನ ಅಂಗಡಿಯು ಉದ್ಘಾಟನೆಗೊಂಡಿತು. ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಕೇವಲ ದಿನನಿತ್ಯದ ಖರ್ಚಿಗೆ ಬಳಸಿಕೊಳ್ಳದೆ, ಅದನ್ನು ಬಂಡವಾಳವನ್ನಾಗಿ ಪರಿವರ್ತಿಸಿ ಶಕುಂತಲಾ ಅವರು ಮಹಿಳಾ ಸ್ವಾವಲಂಬನೆಗೆ ಮಾದರಿಯಾಗಿದ್ದಾರೆ.

ಬಂಟ್ವಾಳ ತಾಲೂಕು ಐದು ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ ಪೂಜಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ನಾರಾಯಣ ನಾಯ್ಕ ಅವರು ಅಂಗಡಿಗೆ ಭೇಟಿ ನೀಡಿ ಶಕುಂತಲಾ ಅವರನ್ನು ಅಭಿನಂದಿಸಿದರು.

“ಶಕುಂತಲಾ ಅವರ ಈ ಸಾಧನೆಯು ಇತರೆ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು, ಮಹಿಳಾ ಸ್ವಾವಲಂಬನೆಗೆ ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಜಯಂತಿ ವಿ ಪೂಜಾರಿ ತಿಳಿಸಿದ್ದಾರೆ.

ಶಕುಂತಲಾ ಅವರು ತಮ್ಮ ಪತಿ, ಚಾಲಕರಾಗಿ ಕೆಲಸ ಮಾಡುತ್ತಿರುವ ಜಯಾನಂದ ಹಾಗೂ ವಿದ್ಯಾರ್ಥಿಗಳಾದ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ತಮ್ಮದೇ ಆದ ಈ ಸ್ವಂತ ಉದ್ಯಮದ ಮೂಲಕ ಅವರು ಕುಟುಂಬಕ್ಕೆ ಹೆಚ್ಚುವರಿ ಆದಾಯದ ಮೂಲವನ್ನು ಸೃಷ್ಟಿಸಿಕೊಂಡಿದ್ದಾರೆ.

ಮೂರು ವರ್ಷಗಳ ಅವಧಿಯಲ್ಲಿ ಗೃಹ ಲಕ್ಷ್ಮಿ ಯೋಜನೆಯ ಮಾಸಿಕ 2,000 ರೂ. ಸಹಾಯಧನದಿಂದ ಒಟ್ಟು 72,000 ರೂ.ಗಳನ್ನು ಶಕುಂತಲಾ ಉಳಿತಾಯ ಮಾಡಿದ್ದರು. ಈ ಉಳಿತಾಯಕ್ಕೆ ಕುಟುಂಬದವರ ನೆರವನ್ನೂ ಸೇರಿಸಿ ಒಟ್ಟು 2.50 ಲಕ್ಷ ರೂ.ಗಳನ್ನು ಬಟ್ಟೆ ಮತ್ತು ಗಾರ್ಮೆಂಟ್ಸ್ ಅಂಗಡಿ ಸ್ಥಾಪನೆಗೆ ವಿನಿಯೋಗಿಸಿದ್ದಾರೆ. ಶಕುಂತಲಾ ಅವರಿಗೆ ಗೃಹ ಲಕ್ಷ್ಮಿ ನಿಧಿಯು ಕೇವಲ ಆರ್ಥಿಕ ಸಹಾಯ ಮಾತ್ರವಲ್ಲದೆ, ಆರ್ಥಿಕ ಸ್ವಾತಂತ್ರ‍್ಯದ ಮೊದಲ ಹೆಜ್ಜೆಯಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now