
ದಸರಾ ಕಳೆದ ನಂತರ ಮುಂದಿನ ವಾರದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ ಕರೆಯುತ್ತೇನೆ. ಪ್ರತಿಭಟನೆ ಕೈಬಿಡಬೇಕು ಎಂದು ರೈತರಿಗೆ ಕೈಮುಗಿದು ಕೇಳುತ್ತೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು.
ರಾಜ್ಯ ಸರ್ಕಾರವೊಂದರಿಂದಲೇ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಇದರಲ್ಲಿ ಕೇಂದ್ರ ಸರ್ಕಾರ, ಬ್ಯಾಂಕುಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪಾತ್ರವೂ ಇದೆ. ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ರೈತರು ಕರೆದಲ್ಲಿಗೆ ಬರಲು ನಾನು ಸಿದ್ಧನಿದ್ದೇನೆ. ನಿಮ್ಮ ಪರವಾಗಿ ನಾನು ಆಲೋಚನೆ ಮಾಡುತ್ತಿದ್ದೇನೆ. ನಿಮ್ಮ ಜೊತೆಯಲ್ಲೇ ನಾನು ಬೀದಿಯಲ್ಲೇ ಮಲಗಲು ಸಿದ್ಧ. ನೀವು ನೀಡಿದ ಚಾಪೆಯ ಮೇಲೆ ಮಲಗುತ್ತೇನೆ. ನೀವು ನೀಡಿದ ರೊಟ್ಟಿ ಸ್ವೀಕರಿಸುತ್ತೇನೆ.
ರೈತರೇ ನಮ್ಮ ದೇವರುಗಳು. ನಮ್ಮನ್ನು ಸಾಕಿ, ಬೆಳೆಸುವವರು ನೀವು. ರೈತರಿಗೆ ಸಂಬಳವಿಲ್ಲ, ಪಿಂಚಣಿಯಿಲ್ಲ, ಪ್ರಮೋಷನ್ ಇಲ್ಲ. ನಿಮ್ಮ ಬದುಕಿನ ಭದ್ರತೆಗೆ ಸರ್ಕಾರ ಕೈಜೋಡಿಸಬೇಕು. ನಿಮ್ಮ ಸಮಸ್ಯೆಗಳನ್ನು ಅರಿತುಕೊಳ್ಳಲು ಬೆಂಗಳೂರಿನಿಂದ ಕಿತ್ತೂರಿಗೆ ಬಂದಿದ್ದೇನೆ. ನಿಮ್ಮ ಹೋರಾಟದ ನೋವು ಮತ್ತು ಸಂಕಷ್ಟಗಳು ನನಗೆ ಅರ್ಥವಾಗಿವೆ. ಸಹಕಾರ, ಕೃಷಿ ಮತ್ತು ಸಕ್ಕರೆ ಸಚಿವರನ್ನು ದೆಹಲಿಗೆ ಕಳುಹಿಸಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ.
ಕಾರ್ಖಾನೆಗಳ ಉಳಿವಿಗೂ ಕ್ರಮ ಅಗತ್ಯ: ಸಕ್ಕರೆ ಕಾರ್ಖಾನೆಗಳ ನಿರ್ವಹಣೆ ಮತ್ತು ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ. ಕಾರ್ಖಾನೆಗಳ ಮಾಲೀಕರು ನಷ್ಟ, ವಿದ್ಯುತ್ ಖರೀದಿ, ಉತ್ಪಾದನಾ ವೆಚ್ಚ ಹಾಗೂ ಇತರ ರಾಜ್ಯಗಳ ನಿಯಂತ್ರಣ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ತಮ್ಮ ಸಂಕಷ್ಟಗಳನ್ನು ಹೇಳುತ್ತಿದ್ದಾರೆ. ಕೆಲವು ಕಾರ್ಖಾನೆಗಳನ್ನು ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಈ ಕುರಿತು ನಾನೂ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಪ್ರಶ್ನಿಸಿದ್ದೆ.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿಯೂ ಕಾರ್ಖಾನೆಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗಿತ್ತು. ಈಗಲೂ ಕಾರ್ಖಾನೆಗಳು ಮುಚ್ಚುವ ಪರಿಸ್ಥಿತಿ ಬರಬಾರದು. ಕಾರ್ಖಾನೆಗಳು ಉಳಿದರೆ ಮಾತ್ರ ರೈತರಿಗೂ ಅನುಕೂಲವಾಗುತ್ತದೆ.
ಕಬ್ಬಿನ ಬೆಲೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಯಾವ ಮಾರ್ಗದಲ್ಲಿ ನೆರವು ಒದಗಿಸಬಹುದು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಕೇಂದ್ರ ಸರ್ಕಾರದ ಸಚಿವರನ್ನೂ ಭೇಟಿ ಮಾಡಿ ರೈತರ ಪರವಾಗಿ ಮನವಿ ಸಲ್ಲಿಸಲಾಗುವುದು.
ರೈತರ ಹೋರಾಟಕ್ಕೆ ಬೆಂಬಲ: ರೈತರ ಸಂಘಟನೆ ಮತ್ತು ಹೋರಾಟದ ಶಕ್ತಿಯನ್ನು ಸರ್ಕಾರ ಗುರುತಿಸಿದೆ. ರೈತರ ಧ್ವನಿ ವಿಧಾನಸೌಧದಿಂದ ದೆಹಲಿಯವರೆಗೂ ತಲುಪಿದೆ. ನಿಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ರೈತರು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ರೈತರ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ರೈತರ ನೋವು ಕಾರ್ಖಾನೆ ಮಾಲೀಕರಿಗೂ ಅರ್ಥವಾಗಬೇಕು.
ಶಾಂತಿಯುತ ಹೋರಾಟಕ್ಕೆ ಮನವಿ: ರೈತರು ಇಲ್ಲಿಯವರೆಗೆ ಯಶಸ್ವಿಯಾಗಿ ಹೋರಾಟ ನಡೆಸಿದ್ದು, ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ರೈತರು ಕಾನೂನು ಸಂಘರ್ಷಕ್ಕೆ ಅವಕಾಶವಾಗುವ ಘಟನೆಗಳಿಂದ ದೂರವಿರಬೇಕು. ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ರೈತರ ಸಮಸ್ಯೆ ಪರಿಹಾರವಾಗಬೇಕು ಎಂಬ ಉದ್ದೇಶದಿಂದಲೇ ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ.
ಬರಗಾಲದ ಪರಿಹಾರಕ್ಕೆ ಕೇಂದ್ರದ ನೆರವು ಅಗತ್ಯ: ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದಾದ್ಯಂತ ಬರಗಾಲ ಘೋಷಣೆ ಮಾಡಲಾಗಿದೆ. ಬರ ಪರಿಹಾರಕ್ಕಾಗಿ ಪ್ರಧಾನಮಂತ್ರಿಗಳ ಭೇಟಿಗೆ ಸಮಯ ಕೋರಲಾಗಿದ್ದು, ಕೇಂದ್ರ ಗೃಹ ಸಚಿವರನ್ನೂ ಭೇಟಿ ಮಾಡಿ ರಾಜ್ಯಕ್ಕೆ ಅಗತ್ಯ ನೆರವು ನೀಡುವಂತೆ ಮನವಿ ಸಲ್ಲಿಸಲಾಗುವುದು.
ರೈತರಿಗೆ ವಿದ್ಯುತ್ ಪೂರೈಕೆಗಾಗಿ ರಾಜ್ಯ ಸರ್ಕಾರ ವಾರ್ಷಿಕ ಸುಮಾರು ₹22,000 ಕೋಟಿ ವೆಚ್ಚ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವು ನೀಡಲಾಗುತ್ತಿದೆ. ಆದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಹರಿಸಲು ಎಲ್ಲರ ಸಹಕಾರ ಅಗತ್ಯವಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now