
ಮುಂಬೈ: ಭಾರೀ ಮಳೆಯ ಆರ್ಭಟಕ್ಕೆ ಮುಂಬೈ ಮತ್ತು ಪುಣೆ ನಡುವಿನ ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಸ್ತಬ್ದಗೊಂಡಿದೆ. ಕಳೆದ ಕೆಲವು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಗಳು ಮತ್ತು ರೈಲು ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಮಾರ್ಗಮಧ್ಯದಲ್ಲೇ ಸಿಲುಕಿಕೊಂಡು ಪರದಾಡುವಂತಾಗಿದೆ.
ಹವಾಮಾನ ಇಲಾಖೆಯ (IMD) ಮಾಹಿತಿಯಂತೆ ಮುಂಬೈಗೆ ‘ಆರೆಂಜ್ ಅಲರ್ಟ್’ ಹಾಗೂ ಪುಣೆಗೆ ‘ರೆಡ್ ಅಲರ್ಟ್’ ಘೋಷಿಸಿದೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ಮುಂಬೈ, ಪುಣೆ, ಠಾಣೆ ಮತ್ತು ಪಾರ್ಲ್ಸ ಜಿಲ್ಲೆಗಳ ಎಲ್ಲಾ ಶಾಲೆ- ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಭೂಕುಸಿತ – 16 ರೈಲುಗಳು ರದ್ದು
ಸೋಮವಾರ ಮುಂಜಾನೆ 3:05ರ ಸುಮಾರಿಗೆ ಕರ್ಜತ್-ಲೋನಾವಾಲಾ ನಡುವಿನ ಬೋರ್ ಘಾಟ್ ಸೆಕ್ಷನ್‌ನ ಠಾಕೂರ್‌ವಾಡಿ ಹಾಗೂ ಖಂಡಾಲಾ- ಮಂಕಿ ಹಿಲ್ ನಡುವೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ರೈಲ್ವೆ ಹಳಿಗಳ ಮೇಲೆ ಬಂಡೆಗಳು ಮತ್ತು ಮಣ್ಣು ಬಿದ್ದಿದ್ದರಿಂದ ಮುಂಬೈ-ಪುಣೆ ನಡುವಿನ ಪ್ರಮುಖ ಮೂರು ರೈಲು ಮಾರ್ಗಗಳು ಸಂಪೂರ್ಣ ಬಂದ್ ಆಗಿವೆ. ರೈಲ್ವೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರಸಿದ್ಧ ಡೆಕ್ಕನ್ ಕ್ಲೀನ್, ಇಂದ್ರಾಯಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಪ್ರಗತಿ ಎಕ್ಸ್‌ಪ್ರೆಸ್ ಮತ್ತು ಸಿಂಹಗಡ ಎಕ್ಸ್‌ಪ್ರೆಸ್ ಸೇರಿದಂತೆ ಕನಿಷ್ಠ 16 ರೈಲುಗಳನ್ನು ರದ್ದುಗೊಳಿಸಲಾಗಿದೆ. ಇನ್ನು 9 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಹಲವು ರೈಲುಗಳ ಸಂಚಾರವನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ. ಪ್ರಸ್ತುತ ಹಳಿಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now