ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರದೇಶದಿಂದ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣದ ಪೈಪ್‌ಗಳ ಕಳವು: ಇಬ್ಬರ ಬಂಧನ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರದೇಶದಿಂದ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣದ ಪೈಪ್‌ಗಳ ಕಳವು: ಇಬ್ಬರ ಬಂಧನ
0Shares

Kasargod ರಾಷ್ಟ್ರೀಯ ಹೆದ್ದಾರಿ 66ರ ಚಟ್ಟಂಚಾಲ್‌ನಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ಪ್ರದೇಶದಿಂದ ಲಕ್ಷಾಂತರ ರೂ. ಮೌಲ್ಯದ ಕಬ್ಬಿಣದ ಪೈಪ್‌ಗಳನ್ನು ಕಳವುಗೈದ ಆರೋಪದ ಮೇಲೆ ಇಬ್ಬರನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಪಿಲಿಕೋಡ್ ಏಚ್ಚಿಕೊವ್ವಲ್ ನಿವಾಸಿ ಪ್ರಜ್ವಲ್ (33) ಮತ್ತು ಪಡನ್ನ ತೆಕ್ಕೇಕಾಡ್ ನಿವಾಸಿ ಶ್ರೀಜೇಶ್ (29) ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ ಕಳವು ಮಾಡಲಾಗಿದೆ ಎನ್ನಲಾದ ಕಬ್ಬಿಣದ ಪೈಪ್‌ಗಳು ಹಾಗೂ ಅವುಗಳ ಸಾಗಾಟಕ್ಕೆ ಬಳಸಿದ್ದ ಮಿನಿ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಚಟ್ಟಂಚಾಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಮೇಘಾ ಕನ್ಸ್ಟ್ರಕ್ಷನ್ ಕಂಪನಿಗೆ ಸೇರಿದ 30ಕ್ಕೂ ಹೆಚ್ಚು ಬೃಹತ್ ಕಬ್ಬಿಣದ ಪೈಪ್‌ಗಳನ್ನು ಆರೋಪಿಗಳು ತಡರಾತ್ರಿ ಮಿನಿ ಲಾರಿಗೆ ತುಂಬಿಸಿಕೊಂಡು ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ.

ಈ ಸಂದರ್ಭ ರಾತ್ರಿ ಗಸ್ತಿನಲ್ಲಿದ್ದ ಮೇಲ್ಪರಂಬ ಪೊಲೀಸ್‌ ಉಪನಿರೀಕ್ಷಕರ ನೇತೃತ್ವದ ತಂಡಕ್ಕೆ ಮಿನಿ ಲಾರಿಯ ಚಲನವಲನದ ಕುರಿತು ಸಂಶಯ ಮೂಡಿದೆ. ಕೂಡಲೇ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ಪೈಪ್‌ಗಳನ್ನು ಸಾಗಿಸಲು ಅಗತ್ಯವಾದ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.

ಬಳಿಕ ಪೊಲೀಸರು ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು, ಪೈಪ್‌ಗಳು ಹಾಗೂ ಮಿನಿ ಲಾರಿಯನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳವು ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now