ಹೆಸಕುತ್ತೂರು ಶಾಲೆಯಲ್ಲಿ ‘ಹೊನಲು’ ಮಕ್ಕಳ ಹಬ್ಬದ ಸಡಗರ: ವೇದಿಕೆಯಲ್ಲೆಲ್ಲಾ ವಿದ್ಯಾರ್ಥಿಗಳದ್ದೇ ಕಾರುಬಾರು!

ಹೆಸಕುತ್ತೂರು ಶಾಲೆಯಲ್ಲಿ ‘ಹೊನಲು’ ಮಕ್ಕಳ ಹಬ್ಬದ ಸಡಗರ: ವೇದಿಕೆಯಲ್ಲೆಲ್ಲಾ ವಿದ್ಯಾರ್ಥಿಗಳದ್ದೇ ಕಾರುಬಾರು!
0Shares

ಇಲ್ಲಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳೇ ಉದ್ಘಾಟಕರು, ಅಧ್ಯಕ್ಷತೆ ಅವರದ್ದೇ, ಮುಖ್ಯ ಅತಿಥಿಗಳೂ ಅವರೇ. ಜನಪ್ರತಿನಿಧಿಗಳು, ಗಣ್ಯರು, ಇಲಾಖೆಯ ಅಧಿಕಾರಿಗಳು ವೇದಿಕೆಯ ಕೆಳಗೆ ಪ್ರೇಕ್ಷಕರ ಸಾಲಿನಲ್ಲಿದ್ದುಕೊಂಡೆ ವೇದಿಕೆಯ ಮೇಲಿನ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಈ ಮಾದರಿಯಲ್ಲಿ ಇಲ್ಲಿ ಶಾಲಾ ಮಕ್ಕಳ ಹಬ್ಬ ಆಚರಿಸಲಾಗುತ್ತಿದೆ. ವೇದಿಕೆಯ ಮೇಲಿನ ಸಭಾ ನಡಾವಳಿಗಳನ್ನುಮಕ್ಕಳೇ ನಿರ್ವಹಿಸುತ್ತಾರೆ. ಉದ್ಘಾಟನೆಗೆ ಹಾಗೂ ಮುಖ್ಯ ಅತಿಥಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಆಹ್ವಾನಿಸಲಾಗುತ್ತದೆ. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೂ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಇದು ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ನಡೆಯುವ ಶಾಲಾ ವಾರ್ಷಿಕೋತ್ಸವವಾಗಿ ನಡೆಯುತ್ತದೆ.

ವಾರ್ಷಿಕೋತ್ಸವದ ಬೆಳಿಗ್ಗೆಯ ಕಾರ್ಯಕ್ರಮದಲ್ಲಿ ‘ಪೋಷಕರಿಗೆ ಗೌರವ’ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಸಲಾಗುತ್ತದೆ. ಇಲ್ಲಿ ಶಾಲೆಯ ಎಲ್ಲಾ ಪೋಷಕರನ್ನು ಅವರನ್ನು ಮಕ್ಕಳೊಂದಿಗೆ ವೇದಿಕೆಯ ಮೇಲೆ ಗೌರವಿಸಲಾಗುತ್ತದೆ. ಪ್ರತಿ ಪೋಷಕರು ತಮ್ಮ ಮಕ್ಕಳೊಂದಿಗೆ ವೇದಿಕೆಯೇರಿ ಗೌರವ ಸ್ವೀಕರಿಸುತ್ತಾರೆ ಹಾಗೆಯೇ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ತಾವು ಗಳಿಸಿದ ಬಹುಮಾನಗಳನ್ನು ಜೊತೆಯಾಗಿಯೇ ಪಡೆಯುತ್ತಾರೆ. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರವೂ ಮಹತ್ವದ್ದು ಎನ್ನುವ ನೆಲೆಯಲ್ಲಿ ಅವರ ಕೊಡುಗೆಯನ್ನೂ ಗೌರವಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಈ ವರ್ಷದ ಕಾರ್ಯಕ್ರಮಕ್ಕೆ ಹೊನಲು ಎಂದು ಹೆಸರಿಡಲಾಗಿದೆ.

“ಸಿಂಗಾರ, ಬೆಳಕು, ಲಾಲಿತ್ಯ, ಬಣ್ಣ, ಕಲರವ, ನಲಿವು,
ಸೊಬಗು” ಇವೆಲ್ಲವೂ ಈ ಹಿಂದೆ ಬೇರೆ ಬೇರೆ ವರ್ಷಗಳಲ್ಲಿ ಇದೇ ಮಾದರಿಯಲ್ಲಿ ನಡೆಸಲಾದ ಶಾಲಾ ಮಕ್ಕಳ ಹಬ್ಬದ ಕಾರ್ಯಕ್ರಮಗಳ ಹೆಸರುಗಳು.
ಸಾಮಾನ್ಯವಾಗಿ ನವೆಂಬರ್ ತಿಂಗಳ ಯಾವುದಾದರೊಂದು ದಿನದಂದು ಈ ಕಾರ್ಯಕ್ರಮ ನಡೆಯುತ್ತದೆ.


ನವೆಂಬರ್ 21, 2026 – ಮಕ್ಕಳ ಹಬ್ಬದ ಸಡಗರ – “ಹೊನಲು”

“ನಮ್ಮೊಳಗಿನ ಪ್ರತಿಭೆಗೆ ಕಠಿಣ ಪರಿಶ್ರಮವೂ ಜೊತೆಯಾದರೆ ನಾವು ಸಾಧಕರಾಗಿ ಬೆಳೆಯಲು ಸಾಧ್ಯ” ಎಂದು ಝೀ ಟಿವಿ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್ ಎ ಜೆ ಮಂಗಳೂರು ನುಡಿದರು. ಅವರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು, ಕುಂದಾಪುರ ವಲಯ ಇಲ್ಲಿನ ಮಕ್ಕಳ ಹಬ್ಬದ ಸಡಗರ – “ಹೊನಲು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಭಾಧ್ಯಕ್ಷತೆಯನ್ನು ಶಾಲಾ ವಿದ್ಯಾರ್ಥಿ ನಾಯಕಿ ನಭಾ ಎಸ್ ಶೆಟ್ಟಿ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಶಾಲಾ ವಿದ್ಯಾರ್ಥಿ ವಿಪಕ್ಷ ನಾಯಕ ಅದ್ವಿತ್ ವಿ ಶೆಟ್ಟಿ, ಶಾಲಾ ಸಾಂಸ್ಕೃತಿಕ ಸಚಿವರಾದ ಅಕ್ಷರ ಎ, ಪಂಚಮಿ, ಶಾಲಾ ವಿದ್ಯಾರ್ಥಿ ಉಪನಾಯಕ ಸುಜಲ್ ಉಪಸ್ಥಿತರಿದ್ದರು .

ಈ ಸಂದರ್ಭದಲ್ಲಿ 2026 ನೇ ಸಾಲಿನಲ್ಲಿ “ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರಾದ ಶಾಲಾ ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಯವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಿತು. ಯೋಗ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ‘ಜೀವಮಾನ ಸಾಧನೆ ಪ್ರಶಸ್ತಿ’ ಪಡೆದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ಎಂ, ‘ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ’ ಪಡೆದ ಶಾಲಾ ಸಹ ಶಿಕ್ಷಕಿ ವಿಜಯಾ ಆರ್, ರೋಟರಿ ಕ್ಲಬ್ ತೆಕ್ಕಟ್ಟೆ ವತಿಯಿಂದ ‘ನೇಶನ್ ಬಿಲ್ಡರ್ ಪ್ರಶಸ್ತಿ’ ಪಡೆದ ಹೆಸಕುತ್ತೂರು ಪ್ರೌಢಶಾಲಾ ಶಿಕ್ಷಕ ರಾಘವೇಂದ್ರ ದೇವಾಡಿಗ ರನ್ನು ಗೌರವಿಸಲಾಯಿತು. ಹಾಗೆಯೇ 17 ವರ್ಷಗಳ ಕಾಲ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿದ ಶಿಕ್ಷಕ ಶೇಖರ್ ಕುಮಾರ ರವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಧಾಕರ ಕುಲಾಲ್, ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ ಶೆಟ್ಟಿ, ಸಹಾಯ ಶಿಕ್ಷಕರಾದ ರಾಜೀವ ಕುಲಾಲ್, ಸಂಜೀವ ಎಂ, ವಿಜಯ ಆರ್, ರವೀಂದ್ರ ನಾಯಕ್, ಸ್ವಾತಿ ಬಿ, ಕುಸುಮ, ಸೌಮ್ಯಾ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಆಶಾ ಕುಲಾಲ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಧನ್ಯ ಆರ್ ಸ್ವಾಗತಿಸಿ, ಸುರಕ್ಷಾ ವಂದಿಸಿದರು. ಸಹ ಶಿಕ್ಷಕರಾದ ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now