
ದೋಹಾ, ಕತಾರ್ : ಕತಾರ್ನಲ್ಲಿರುವ ಭಾರತೀಯ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಭಾರತದ ಭವ್ಯ ಪರಂಪರೆಯನ್ನು ಇಲ್ಲಿನ ನೆಲದಲ್ಲಿ ವಿಸ್ತಾರವಾಗಿ ಪಸರಿಸುವ ನಿಟ್ಟಿನಲ್ಲಿ, ಕರ್ನಾಟಕ ಸಂಘ ಕತಾರ್ (ಕೆ ಎಸ್ ಕ್ಯೂ) ನೂತನ ವ್ಯವಸ್ಥಾಪನಾ ಸಮಿತಿಯು ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿಗಳಾದ (ಡೆಪ್ಯುಟಿ ಚೀಫ್ ಆಫ್ ಮಿಷನ್) ಸಂದೀಪ್ ಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿತು

.
ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ, 2026-28ನೇ ಸಾಲಿನ ನೂತನ ಸಮಿತಿಯು ತನ್ನ ಪದಾಧಿಕಾರಿಗಳನ್ನು ಪರಿಚಯಿಸಿತಲ್ಲದೆ, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳ ಪ್ರಗತಿಪರ ರೂಪುರೇಷೆಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಿತು.
ಸಭೆಯಲ್ಲಿ ಕತಾರ್ನಲ್ಲಿರುವ ವಿಶಾಲ ಭಾರತೀಯ ಸಮುದಾಯದ ಕ್ರಿಯಾಶೀಲತೆ ಮತ್ತು ಬೆಳವಣಿಗೆಯನ್ನು ಶ್ಲಾಘಿಸಿದ ಉಪ ರಾಯಭಾರಿ ಸಂದೀಪ್ ಕುಮಾರ್ ಅವರು, ಸಮುದಾಯದ ಒಟ್ಟಾರೆ ಏಳಿಗೆಗಾಗಿ ಹೆಚ್ಚು ಅಂತರ್ಗತ ಮತ್ತು ಒಗ್ಗಟ್ಟಿನ ಕೆಲಸದ ಅಗತ್ಯತೆಯನ್ನು ಪ್ರತಿಪಾದಿಸಿದರು. ಬೃಹತ್ ಪ್ರಮಾಣದ ಸಮುದಾಯ ಆಚರಣೆಗಳು ಮತ್ತು ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳ ಆಯೋಜಿಸುವಾಗ ಎಲ್ಲರನ್ನೂ ಒಳಗೊಳ್ಳುವ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಇದಕ್ಕಾಗಿ ಕತಾರ್ನಲ್ಲಿ ರಾಯಭಾರ ಕಚೇರಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಭಾರತೀಯ ಅಗ್ರಗಣ್ಯ ಸಂಸ್ಥೆಗಳು ಹಾಗೂ ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ, ಅತ್ಯಂತ ನಿಕಟವಾಗಿ ಮತ್ತು ಒಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ಕೆ ಎಸ್ ಕ್ಯೂ ನಾಯಕತ್ವಕ್ಕೆ ಪ್ರಮುಖ ಸಲಹೆ ನೀಡಿದರು. ಎಲ್ಲಾ ಸಂಘಟನೆಗಳ ಸಾಮೂಹಿಕ ಒಗ್ಗಟ್ಟು, ಪರಸ್ಪರ ಸಹಕಾರ ಮತ್ತು ಸಮನ್ವಯತೆಯ ಮೂಲಕವೇ ಭಾರತದ ವಿಭಿನ್ನ ಹಾಗೂ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಕತಾರ್ನಲ್ಲಿ ಇನ್ನಷ್ಟು ವ್ಯಾಪಕವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದು ಸಂದೀಪ್ ಕುಮಾರ್ ಅವರು ಈ ಸಂದರ್ಭದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದರು.
ಅವರ ಈ ಅಮೂಲ್ಯವಾದ ಆಶಯಕ್ಕೆ ಪೂರಕವಾಗಿ ಮುಂಬರುವ ದಿನಗಳಲ್ಲಿ ಸಹಭಾಗಿತ್ವ ಮತ್ತು ಎಲ್ಲರನ್ನೂ ಒಳಗೊಳ್ಳುವ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಕರ್ನಾಟಕ ಸಂಘದ ಸಮಿತಿ ಭರವಸೆ ನೀಡಿತು. ಅತ್ಯಂತ ಯಶಸ್ವಿಯಾಗಿ ಮೂಡಿಬಂದ ಈ ಮಾತುಕತೆಯ ಕೊನೆಯಲ್ಲಿ ಉಪ ರಾಯಭಾರಿ ಸಂದೀಪ್ ಕುಮಾರ್ ಅವರಿಗೆ ಸಾಂಪ್ರದಾಯಿಕ ಶಲ್ಯ ಹೊದಿಸಿ, ನೆನಪಿನ ಕಾಣಿಕೆ ನೀಡಿ ಹೃತ್ಪೂರ್ವಕವಾಗಿ ಗೌರವಿಸಲಾಯಿತು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now