ಮಾನವೀಯ ಮೌಲ್ಯ, ಸೌಹಾರ್ದತೆಗೆ ಗೌರವ: ಕೊಳಲಗಿರಿ ಫ್ರ್ಯಾಂಕಿ ಡಿಸೋಜಗೆ ಭವ್ಯ ನಾಗರಿಕ ಸನ್ಮಾನ

ಮಾನವೀಯ ಮೌಲ್ಯ, ಸೌಹಾರ್ದತೆಗೆ ಗೌರವ: ಕೊಳಲಗಿರಿ ಫ್ರ್ಯಾಂಕಿ ಡಿಸೋಜಗೆ ಭವ್ಯ ನಾಗರಿಕ ಸನ್ಮಾನ
0Shares

ಬ್ರಹ್ಮಾವರ, ನ.5: ಸಮಾಜದಲ್ಲಿ ಜಾತಿ, ಧರ್ಮದ ಭೇದಭಾವವಿಲ್ಲದೆ ಸೌಹಾರ್ದತೆ, ಶಾಂತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಸಾಮಾಜಿಕ ಸೇವೆ ಮತ್ತು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರಿಗೆ ಗೋಳಿಕಟ್ಟೆ ಅಲ್-ಫಲಾಹ್ ಜುಮ್ಮಾ ಮಸೀದಿಯ ವತಿಯಿಂದ ಭವ್ಯ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು.

ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ಗೋಳಿಕಟ್ಟೆಯ ಇತಿಹಾಸ ಪ್ರಸಿದ್ಧ ಅಲ್-ಫಲಾಹ್ ಜುಮ್ಮಾ ಮಸೀದಿಯ ನೂತನ ಸುಸಜ್ಜಿತ ಕಟ್ಟಡದ ಉದ್ಘಾಟನೆ, ಸಾರ್ವಜನಿಕ ಮಸೀದಿ ಸಂದರ್ಶನ ಹಾಗೂ ಸರ್ವಧರ್ಮ ಸೌಹಾರ್ದ ಸಂಗಮ ಕಾರ್ಯಕ್ರಮವು ನವೆಂಬರ್ 4ರ ಬುಧವಾರದಂದು ಅತ್ಯಂತ ಸಂಭ್ರಮ, ಭಕ್ತಿ ಹಾಗೂ ಭಾವೈಕ್ಯತೆಯ ವಾತಾವರಣದಲ್ಲಿ ಜರುಗಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ನಾಗರಿಕ ಸನ್ಮಾನ ಸಮಾರಂಭದಲ್ಲಿ ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಜನಸಾಮಾನ್ಯರ ಹಕ್ಕುಗಳ ರಕ್ಷಣೆಗಾಗಿ ನಿರಂತರವಾಗಿ ಹೋರಾಡುತ್ತಿರುವ, ಬಡವರು, ಶೋಷಿತರು ಮತ್ತು ಸಂಕಷ್ಟದಲ್ಲಿರುವವರ ಪರವಾಗಿ ಧ್ವನಿಯಾಗುತ್ತಿರುವ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ಸಮಾಜದಲ್ಲಿ ಧರ್ಮಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರತ್ವ ಮತ್ತು ಸಾಮರಸ್ಯವನ್ನು ಬೆಸೆಯುವಲ್ಲಿ ಅವರು ಸಲ್ಲಿಸುತ್ತಿರುವ ಸೇವೆ, ನಿಸ್ವಾರ್ಥ ಸಾಮಾಜಿಕ ಕಳಕಳಿ ಹಾಗೂ ಜನಪರ ಹೋರಾಟಗಳನ್ನು ಗುರುತಿಸಿ ಅಲ್-ಫಲಾಹ್ ಜುಮ್ಮಾ ಮಸೀದಿ ಆಡಳಿತ ಸಮಿತಿ, ಅಲ್-ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್, ಹಿದಾಯತುಲ್ ದಫ್ ಕಮಿಟಿ ಹಾಗೂ ಸ್ವಲಾತ್ ಕಮಿಟಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ, ರೆ. ಫಾದರ್ ಡೆನಿಸ್ ಅಲೆಕ್ಸಾಂಡರ್ ಡೆಸ್, ಡಾ. ಅಬ್ದುಲ್ ರಶೀದ್, ಮಾಜಿ ಸಚಿವ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ವಿವಿಧ ಧರ್ಮಗಳ ಧರ್ಮಗುರುಗಳು ಹಾಗೂ ದೇವಾಲಯಗಳ ಧರ್ಮದರ್ಶಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಾನವೀಯ ಸೇವೆಗಳ ಮೂಲಕ ಗುರುತಿಸಿಕೊಂಡಿರುವ ರವಿ ಕಟಪಾಡಿ ಅವರಿಗೂ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರು, ದಾನಿಗಳು ಹಾಗೂ ಸಮಾಜಸೇವಕರನ್ನು ಸನ್ಮಾನಿಸಲಾಯಿತು.

ಸನ್ಮಾನವು ತುಳುನಾಡ ರಕ್ಷಣಾ ವೇದಿಕೆಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಸಲ್ಲಿಸಿದ ಗೌರವ: ಫ್ರ್ಯಾಂಕಿ ಡಿಸೋಜ

ಸನ್ಮಾನ ಸ್ವೀಕರಿಸಿ ಮಾತನಾಡಿದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು, ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸೋದರತ್ವ ಮತ್ತು ಪರಸ್ಪರ ಗೌರವದ ವಾತಾವರಣ ನಿರ್ಮಾಣವಾಗಬೇಕು. ಜಾತಿ-ಧರ್ಮಗಳ ಹೆಸರಿನಲ್ಲಿ ಸಮಾಜ ವಿಭಜನೆಯಾಗದೆ ಎಲ್ಲರೂ ಒಂದಾಗಿ ಬದುಕುವ ಮೂಲಕ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

“ಈ ಸನ್ಮಾನ ನನಗೆ ವೈಯಕ್ತಿಕವಾಗಿ ಸಂದ ಗೌರವವಲ್ಲ. ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಜನರ ಹಕ್ಕುಗಳಿಗಾಗಿ ಹಗಲಿರುಳು ಶ್ರಮಿಸುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತನಿಗೂ ಸಂದ ಗೌರವವಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಸಮಾಜದ ಸಾಮರಸ್ಯ ಹಾಗೂ ಮಾನವೀಯ ಸೇವೆಯ ಕಾರ್ಯಗಳಲ್ಲಿ ಮುಂದೆಯೂ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇನೆ” ಎಂದು ಅವರು ಭಾವುಕರಾಗಿ ನುಡಿದರು.

ತುಳುನಾಡ ರಕ್ಷಣಾ ವೇದಿಕೆಯ ಮೂಲಕ ಜನಪರ ಹೋರಾಟ, ಸಾಮಾಜಿಕ ಸೇವೆ, ಸಂಕಷ್ಟದಲ್ಲಿರುವವರಿಗೆ ನೆರವು ಹಾಗೂ ಸಮಾಜದ ವಿವಿಧ ವರ್ಗಗಳ ನಡುವೆ ಸೌಹಾರ್ದತೆಯ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರಿಗೆ ದೊರೆತ ಈ ಗೌರವವು ಸಂಘಟನೆಯ ಕಾರ್ಯಕರ್ತರಲ್ಲಿಯೂ ಸಂತಸ ಮೂಡಿಸಿದೆ.

ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷರು, ಪದಾಧಿಕಾರಿಗಳು, ಗೋಳಿಕಟ್ಟೆಯ ಸದಸ್ಯರು, ವಿವಿಧ ಧರ್ಮಗಳ ಧರ್ಮಗುರುಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

ಸರ್ವಧರ್ಮಗಳ ಜನರು ಒಂದೇ ವೇದಿಕೆಯಲ್ಲಿ ಸೇರಿ ಪರಸ್ಪರ ಪ್ರೀತಿ, ಗೌರವ ಮತ್ತು ಸಹಬಾಳ್ವೆಯ ಸಂದೇಶ ಸಾರಿದ ಈ ಸೌಹಾರ್ದ ಸಂಗಮವು ಸಮಾಜಕ್ಕೆ ಮಾದರಿಯಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now