ಭಟ್ಕಳದ ರೌಡಿ ಶೀಟರ್‌ಗೆ 6 ತಿಂಗಳು ಗಡಿಪಾರು: ಉತ್ತರ ಕನ್ನಡದಿಂದ ಮೈಸೂರಿಗೆ ಸ್ಥಳಾಂತರ ಆದೇಶ

ಭಟ್ಕಳದ ರೌಡಿ ಶೀಟರ್‌ಗೆ 6 ತಿಂಗಳು ಗಡಿಪಾರು: ಉತ್ತರ ಕನ್ನಡದಿಂದ ಮೈಸೂರಿಗೆ ಸ್ಥಳಾಂತರ ಆದೇಶ
0Shares

ಭಟ್ಕಳ: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಜಗದೀಶ ವಾಸು ಮೊಗೇರ (33) ಎಂಬಾತನನ್ನು 6 ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಮೈಸೂರು ನಗರಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಜಗದೀಶ ವಿರುದ್ಧ ಭಟ್ಕಳ ಗ್ರಾಮೀಣ ಹಾಗೂ ಮುರ್ಡೇಶ್ವರ ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹಲ್ಲೆ, ಕೊಲೆ ಯತ್ನ, ಸುಲಿಗೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣಗಳು ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ.

ಆರೋಪಿ ಸಾರ್ವಜನಿಕರಿಗೆ ಬೆದರಿಕೆ ಹಾಕುವುದು, ಸಾಕ್ಷಿದಾರರ ಮೇಲೆ ಒತ್ತಡ ಹೇರುವುದು, ಕ್ಷುಲ್ಲಕ ಕಾರಣಕ್ಕೂ ಹಲ್ಲೆ ನಡೆಸುವುದು ಹಾಗೂ ತನ್ನ ಗೂಂಡಾ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವುದಾಗಿ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದರು.

ಈ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಜುಲೈ 29, 2026ರಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ಉತ್ತರ ಕನ್ನಡ ಜಿಲ್ಲೆಯಿಂದ ಮೈಸೂರು ನಗರದ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡುವ ಆದೇಶ ನೀಡಿದ್ದಾರೆ.

ಆದೇಶದಂತೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಜಗದೀಶನನ್ನು ಮೈಸೂರು ನಗರದ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಕರೆದೊಯ್ದು ಅಲ್ಲಿನ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now