
ಉಡುಪಿ: ಬೈಕ್ಗೆ ವೇಗವಾಗಿ ಬಂದ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮರ್ಣೆ ಗ್ರಾಮದ ಅಜೆಕಾರು ದೊಡ್ಡಪಲ್ಕೆ ಕ್ರಾಸ್ ಬಳಿ ಸಂಭವಿಸಿದೆ.
ಅಜೆಕಾರು ಬೊಂಡುಕುಮೇರಿಯ ಲೋಕೇಶ್ ಕುಲಾಲ್ (36) ಮೃತಪಟ್ಟವರು.
ನ.21ರಂದು ರಾತ್ರಿ ಸುಮಾರು 9 ಗಂಟೆಗೆ ಲೋಕೇಶ್ ಅವರು ಬೈಕ್ನಲ್ಲಿ ಅಜೆಕಾರಿನಿಂದ ಮನೆಗೆ ತೆರಳುತ್ತಿದ್ದಾಗ ದೊಡ್ಡಪಲ್ಕೆ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಎದುರಿನಿಂದ ಅಜೆಕಾರು ಕಡೆಗೆ ಅತಿವೇಗವಾಗಿ ಬರುತ್ತಿದ್ದ ಕ್ರೇನ್ ರಸ್ತೆ ಬಲಭಾಗಕ್ಕೆ ಚಲಿಸಿ ಲೋಕೇಶ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಬಳಿಕ ಕ್ರೇನ್ ನಿಲ್ಲಿಸದೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಲೋಕೇಶ್ ಅವರ ಪರಿಚಯಸ್ಥರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಮುಂದುವರಿದರೂ ಚೇತರಿಸಿಕೊಳ್ಳದೆ ಅವರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಕ್ರೇನ್ ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now