ಉತ್ತರ ಕನ್ನಡದಲ್ಲಿ ತಂತ್ರಜ್ಞಾನ ಮತ್ತು ಉದ್ಯಮಶೀಲತೆಗೆ ಹೊಸ ವೇದಿಕೆ: ಶಿರಸಿಯಲ್ಲಿ ಸಮಾವೇಶದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿ

ಉತ್ತರ ಕನ್ನಡದಲ್ಲಿ ತಂತ್ರಜ್ಞಾನ ಮತ್ತು ಉದ್ಯಮಶೀಲತೆಗೆ ಹೊಸ ವೇದಿಕೆ: ಶಿರಸಿಯಲ್ಲಿ ಸಮಾವೇಶದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿ
0Shares

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ, ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ “ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಸಮಾವೇಶ – ಉತ್ತರ ಕನ್ನಡ” ಕಾರ್ಯಕ್ರಮವು ಇಂದು ಶಿರಸಿಯ ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಮಾವೇಶದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತ ಯುವಜನರು ಉದ್ಯೋಗ ಮತ್ತು ಉದ್ಯಮದ ಅವಕಾಶಗಳಿಗಾಗಿ ಬೇರೆ ಜಿಲ್ಲೆಗಳಿಗೆ ಅಥವಾ ನಗರಗಳಿಗೆ ವಲಸೆ ಹೋಗುವ ಬದಲು, ಜಿಲ್ಲೆಯಲ್ಲಿಯೇ ನೆಲೆಸಿ ಸ್ಥಳೀಯವಾಗಿ ಅಂತರರಾಷ್ಟ್ರೀಯ ಮಟ್ಟದ ಕೆಲಸಗಳನ್ನು ನಿರ್ವಹಿಸುವಂತಾಗಬೇಕು. ಯುವಜನರು ಹೊಸ ಉದ್ಯಮಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅಗತ್ಯವಾದ ಪ್ರೇರಣೆ, ಮಾರ್ಗದರ್ಶನ ಹಾಗೂ ಸಹಕಾರ ಒದಗಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ.

ತಂತ್ರಜ್ಞಾನ ವೃತ್ತಿಪರರು, ಯಶಸ್ವಿ ಉದ್ಯಮಿಗಳು, ಕೈಗಾರಿಕಾ ಮುಖಂಡರು, ವ್ಯಾಪಾರಸ್ಥರು ಹಾಗೂ ಪ್ರಬುದ್ಧ ನಾಗರಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಜಿಲ್ಲೆಯ ಅಭಿವೃದ್ಧಿಗೆ ಹೊಸ ಸಾಧ್ಯತೆಗಳನ್ನು ರೂಪಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಯಶಸ್ವಿ ಉದ್ಯಮಿಗಳು ಮತ್ತು ತಂತ್ರಜ್ಞರೊಂದಿಗೆ ನೇರ ಸಂವಾದ ನಡೆಸುವ ಮೂಲಕ ಯುವಜನರಿಗೆ ಉದ್ಯೋಗ ಹಾಗೂ ಉದ್ಯಮಶೀಲತೆಯ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಲಾಯಿತು.

ಈ ಸಂದರ್ಭದಲ್ಲಿ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸಿಇಒ ಹಾಗೂ ಸಂಪಾದಕರಾದ ಮೋಹನ್ ಹೆಗಡೆ, ದತ್ತಗುರು ಹೆಗಡೆ, ಉಮಾಮಹೇಶ್ವರ ಹೆಗಡೆ ಗಡಿಕೈ, ಶಿರಸಿ ಟೆಕ್ ಪಾರ್ಕ್ ಅಧ್ಯಕ್ಷರಾದ ಎಸ್.ಜಿ. ಹೆಗಡೆ ಸೇರಿದಂತೆ ಕಾರ್ಯಕ್ರಮದ ಸಂಘಟಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಹೊಸ ಅಲೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಸಮಾವೇಶ ಜಿಲ್ಲೆಯ ಯುವಜನರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಆಶಯ ಮೂಡಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now