ಮೂಡುಬಿದಿರೆ: ಮನೆಯಲ್ಲಿ ವಿದ್ಯುತ್ಶಾಕ್: ತಾಯಿ, ಮಗ ಮೃತ್ಯು

ಮೂಡುಬಿದಿರೆ: ಮನೆಯಲ್ಲಿ ವಿದ್ಯುತ್ಶಾಕ್: ತಾಯಿ, ಮಗ ಮೃತ್ಯು
0Shares

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಕೆಳಗಿನ ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ತಾಯಿ ಮರ್ಸಿ ಮಸ್ಕರೇನಸ್ (45) ಮತ್ತು ಮಗ ಶೋನ್ ಮಸ್ಕರೇನಸ್ (18) ಮೃತಪಟ್ಟಿದ್ದಾರೆ.

ಘಟನೆ ಬುಧವಾರ ಸಾಯಂಕಾಲ ಸುಮಾರು 6.30ರಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಿಗ್ಗೆ 7ರಿಂದ 8 ಗಂಟೆಯ ವೇಳೆಗೆ ಘಟನೆ ಬೆಳಕಿಗೆ ಬಂದಿದ್ದು, ತೋಟದ ಕೆಲಸಕ್ಕೆ ಬಂದ ಕಾರ್ಮಿಕ ಸುಂದರ ಪೂಜಾರಿ ಸ್ಥಳಕ್ಕೆ ಬಂದಾಗ ದುರಂತ ಗಮನಕ್ಕೆ ಬಂದಿದೆ.

ಮೂಡುಬಿದಿರೆಯ ಹೋಲಿ ರೋಸರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಶೋನ್ ಮಸ್ಕರೇನಸ್ ಮನೆಯಲ್ಲಿ ಸ್ನಾನ ಮಾಡಿ ಬಂದ ಬಳಿಕ ಒದ್ದೆ ಬಟ್ಟೆಗಳನ್ನು ಮನೆಯ ಹೊರಭಾಗದಲ್ಲಿದ್ದ ತಂತಿಗೆ ಒಣಗಿಸಲು ಹಾಕುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದ್ದು, ಮಗನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಂಚಿನ ಮನೆಗೆ ಮರದ ಬದಲು ಕಬ್ಬಿಣದ ಪಕ್ಕಾಸು ಅಳವಡಿಸಲಾಗಿದೆ. ಕಬ್ಬಿಣದ ಪಕ್ಕಾಸಿಗೆ ವಿದ್ಯುತ್ ಕಂಬದಿಂದ ನೇರವಾಗಿ ಸಂಪರ್ಕ ಕಲ್ಪಿಸಿದ್ದು, ವೈಯರ್ ಕಿತ್ತು, ಕಬ್ಬಿಣಕ್ಕೆ ವೈಯರ್‌ಗೆ ಬಟ್ಟೆ ಒಣಗಿಸಲು ಹಾಕುವ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಈ ವೇಳೆ ಆತ ಬೊಬ್ಬೆ ಹೊಡೆದಿದ್ದು, ಆತನನ್ನು ರಕ್ಷಿಸಲು ತಾಯಿ ಹೋದಾಗ ಆಕೆಗೂ ವಿದ್ಯುತ್ ಸ್ಪರ್ಶವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರಬಹುದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮರ್ಸಿ ಮಸ್ಕರೇನಸ್ ಅವರ ಪತಿ ಸೈಮನ್ ಮಸ್ಕರೇನಸ್ ಸುಮಾರು 15 ವರ್ಷಗಳ ಹಿಂದೆ ಮೃತಪಟ್ಟಿದ್ದು, ತಾಯಿ ಮಗ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸೈಮನ್ ಅವರ ಸಹೋದರ ಜೆರಿ ಮಸ್ಕರೇನಸ್ ಈ ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದು, ಅವರು ವಿದೇಶದಿಂದ ಮರಳುತ್ತಿದ್ದು, ಬಳಿಕ ಮೃತದೇಹಗಳ ಅಂತ್ಯಕ್ರಿಯೆ ನಡೆಯಲಿದೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪಾಲಡ್ಕ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಪೊಲೀಸರು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now