
ವಿವಿಧ ಕಾರಣಗಳಿಂದ ಬಂಧನದಲ್ಲಿರುವ ವ್ಯಕ್ತಿಗಳಿಗೆ ಮಾನವೀಯ ಗೌರವವನ್ನು ನೀಡಿ, ಅವರ ಮನಃಪರಿವರ್ತನೆಗೆ ಪ್ರಯತ್ನಿಸುವುದು, ಪುನರ್ವಸತಿಗೆ ನೆರವಾಗುವುದು, ಸಮಾಜದಲ್ಲಿ ಮತ್ತೆ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವುದು ಹಾಗೂ ಅವರ ಹಕ್ಕುಗಳನ್ನು ದೊರಕಿಸಿಕೊಟ್ಟು ದೇವರ ಕರುಣೆಯ ಅನುಭವವನ್ನು ಒದಗಿಸುವ ಮಹತ್ವದ ಕಾರ್ಯವನ್ನು ಉಡುಪಿ ಡಯಾಸಿಸ್ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ (Prison Ministry India – PMI) ಸಂಸ್ಥೆಯು ತನ್ನ ಸೇವೆಯ ಮೂಲಕ ಮಾಡುತ್ತಿದೆ.
ಈ ಸಂಸ್ಥೆಯ ಉಡುಪಿ ಘಟಕದ ವತಿಯಿಂದ ಅಕ್ಟೋಬರ್ 15, 2026ರಂದು ಉಡುಪಿ ಜಿಲ್ಲೆಯ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗಾಗಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಯಿತು. ಕೈದಿಗಳಿಗೆ ಮನರಂಜನೆ ಒದಗಿಸುವುದರ ಜೊತೆಗೆ ಅವರ ದೈಹಿಕ ಆರೋಗ್ಯವನ್ನು ಕಾಪಾಡುವುದು, ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಸಾಮಾಜಿಕ ಪುನರ್ವಸತಿಗೆ ನೆರವಾಗುವುದು ಈ ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿತ್ತು.

ಅಂದು ಬೆಳಿಗ್ಗೆ 10.30ಕ್ಕೆ ಕ್ರೀಡಾಕೂಟ ಆರಂಭವಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಸ್ಟೀವನ್ ಪಿಂಟೊ ಅವರ ಮಾರ್ಗದರ್ಶನದಲ್ಲಿ ಪಿ ಎಂ ಐ ತಂಡದ ಸದಸ್ಯರು ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದರು. ಕ್ರಿಕೆಟ್, ಕ್ಯಾರಮ್, ಚೆಸ್ ಸೇರಿದಂತೆ ವಿವಿಧ ಮನರಂಜನಾ ಕ್ರೀಡೆಗಳಲ್ಲಿ ಜೈಲಿನ 138 ಪುರುಷ ಕೈದಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಉಳಿದ ಕೈದಿಗಳೂ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಂತೋಷದಿಂದ ದಿನವನ್ನು ಕಳೆದರು.
ಕ್ರೀಡಾಕೂಟದ ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ನಡೆಯಿತು. ಪಿ ಎಂ ಐ ಸಂಯೋಜಕರಾದ ರೊಜಾರಿಯೊ ಡಿಸೋಜಾ ಅವರು ಜೈಲು ಅಧಿಕಾರಿಗಳು, ಕೈದಿಗಳು ಹಾಗೂ ಪಿ ಎಂ ಐ ತಂಡದ ಸದಸ್ಯರನ್ನು ಸ್ವಾಗತಿಸಿದರು.
ಪಿ ಎಂ ಐ ನ ಮಾಜಿ ಸಂಯೋಜಕರಾದ ವಾಲ್ಟರ್ ಮಾರ್ಟಿಸ್ ಅವರು ಮಾತನಾಡಿ, ಇಂತಹ ಮನರಂಜನಾ ಕ್ರೀಡಾಕೂಟಗಳು ಕೈದಿಗಳ ಸಾಮಾಜಿಕ ಪುನರ್ವಸತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ತಿಳಿಸಿದರು.

ಜೈಲಿನ ಅಧೀಕ್ಷಕರಾದ ವಿ.ಡಿ. ಚವಾಣ್ ಅವರು ಮಾತನಾಡಿ, ಪಿ ಎಂ ಐ ಉಡುಪಿ ಘಟಕದ ಸದಸ್ಯರು ಕೈದಿಗಳಿಗಾಗಿ ಸಲ್ಲಿಸುತ್ತಿರುವ ಉತ್ತಮ ಸೇವೆಯನ್ನು ಶ್ಲಾಘಿಸಿದರು. ಇಂತಹ ಕ್ರೀಡಾಕೂಟಗಳು ಕೈದಿಗಳಿಗೆ ಸಂತೋಷ ಮತ್ತು ಮನರಂಜನೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ವಿಕ್ಟರ್ ಡಿಸೋಜಾ ಅವರು ಸ್ಪರ್ಧೆಗಳಲ್ಲಿ ವಿಜೇತರಾದವರ ಹೆಸರುಗಳನ್ನು ಪ್ರಕಟಿಸಿದರು. ಬಳಿಕ ವೇದಿಕೆಯಲ್ಲಿದ್ದ ಗಣ್ಯರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಕೊನೆಯಲ್ಲಿ ಮ್ಯಾಕ್ಸಿಮ್ ಡಿಸೋಜಾ ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now