ಸೈಂಟ್ ಆಗ್ನೆಸ್ ಕಾಲೇಜಿನ ವಿರುದ್ದ ಪ್ರತಿಭಟನೆ ಮುತಾಲಿಕ್ ಪ್ರಾಯೋಜಿತ : ಪ್ರಶಾಂತ್ ಜತ್ತನ್ನ

ಸೈಂಟ್ ಆಗ್ನೆಸ್ ಕಾಲೇಜಿನ ವಿರುದ್ದ ಪ್ರತಿಭಟನೆ ಮುತಾಲಿಕ್ ಪ್ರಾಯೋಜಿತ : ಪ್ರಶಾಂತ್ ಜತ್ತನ್ನ
0Shares

ಮಂಗಳೂರು : ನಗರದ ಸೈಂಟ್ ಆಗ್ನೆಸ್ ಕಾಲೇಜಿನ ಎದುರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ದಸರಾ ರಜೆಯ ವೇಳೆ ಪರೀಕ್ಷೆ ಕುರಿತು ನಡೆದಿರುವ ಪ್ರತಿಭಟನೆ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಅವರ ಪ್ರಚೋದನೆಯಿಂದಲೇ ನಡೆದಿದ್ದು, ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸಿ ನಡೆದಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.

ಹಿಂದೂ ಬಾಂಧವರ ನವರಾತ್ರಿ ಸಂಭ್ರಮದ ಬಗ್ಗೆ ಪ್ರತಿಯೊಬ್ಬರೂ ಗೌರವದಿಂದ ಜಾತಿ ಮತ ಭೇಧವನ್ನು ಬಿಟ್ಟು ಭಾಗವಹಿಸುತ್ತಾರೆ. ಅದರಲ್ಲಿ ಯಾವುದೇ ರೀತಿಯ ವಿರೋಧ ಇಲ್ಲ. ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಸ್ಥೆಯಲ್ಲಿ ಎಲ್ಲಿಯೂ ಕೂಡ ದಸರಾ ಹಬ್ಬದ ಸಂದರ್ಭದಲ್ಲಿ ಆಯುಧಪೂಜೆ ಮತ್ತು ವಿಜಯ ದಶಮಿ ಹೊರತು ಪಡಿಸಿ, ಹೆಚ್ಚುವರಿ ರಜೆ ನೀಡುವ ಪರಿಪಾಠವಿಲ್ಲ. ಪ್ರಸ್ತುತ ಸೈಂಟ್ ಆಗ್ನೆಸ್ ಕಾಲೇಜು ಸ್ವಾಯತ್ತ (ಅಟೋನಮಸ್) ವಿದ್ಯಾಲಯವಾಗಿದ್ದು, ಅವರ ಪರೀಕ್ಷೆಯ ದಿನಾಂಕಗಳನ್ನು ನಿಗದಿಪಡಿಸುವ ಹಕ್ಕನ್ನು ಸರಕಾರವೇ ಅವರಿಗೆ ನೀಡಿರುತ್ತದೆ. ಆದರೆ ಸರಕಾರಿ ರಜೆಯಂದು ಯಾವುದೇ ಪರೀಕ್ಷೇಗಳನ್ನು ನಿಗದಿಪಡಿಸಿರುವುದಿಲ್ಲ. ಇದರ ಹೊರತಾಗಿಯೂ ಕೆಲವು ಸ್ಥಾಪಿತ ಹಿತಾಸಕ್ತಿಗಳ ಪ್ರಚೋದನೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ನಡೆಸಿರುವ ಪ್ರತಿಭಟನೆ ಕುರಿತು ಪೊಲೀಸ್ ಇಲಾಖೆ ಹಾಗೂ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿ ಅಶಾಂತಿ ಎಬ್ಬಿಸಿದ ಎಬಿವಿಪಿ ಮುಖಂಡರ ವಿರುದ್ದ ಪೋಲಿಸರು ಕ್ರಮ ಕೈಗೊಳ್ಳ ಬೇಕು. ಕೆಲವು ದಿನಗಳ ಹಿಂದೆ ದಸರಾ ರಜೆಯ ಕುರಿತು ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ವಿರುದ್ದ ಬೆದರಿಕೆ ಒಡ್ಡಿದ್ದರು. ಆಗಲೇ ಪೊಲೀಸರು ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು. ಅದರ ಪರಿಣಾಮವಾಗಿ ಆಗ್ನೆಸ್ ಕಾಲೇಜು ಎದುರು ಪ್ರತಿಭಟನೆ ನಡೆಯುವಂತಾಗಿದೆ. ತಮ್ಮ ಕೋಮು ಪ್ರಚೋದನೆಯ ಮೂಲಕ ಸಮಾಜದ ಶಾಂತಿ ಭಂಗ ಮಾಡುವುದೇ ಮುತಾಲಿಕ್ ಅವರ ನಿತ್ಯ ನಿರಂತರ ಕಾಯಕವಾಗಿದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ರಾಜ್ಯ ಹಾಗೂ ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದು ಮುತಾಲಿಕ್ ಅವರಂತಹ ನಿರುದ್ಯೋಗಿ ವ್ಯಕ್ತಿಗಳ ಪುಕ್ಕಟೆ ಸಲಹೆಗಳನ್ನು ಕೇಳಬೇಕಾಗಿಲ್ಲ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಎಂದೂ ಕೂಡ ಬೇರೆ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸವನ್ನು ಮಾಡುತ್ತಿಲ್ಲ. ಬದಲಾಗಿ ಎಲ್ಲಾ ಧರ್ಮದವರ ಹಬ್ಬಗಳನ್ನು ಜೊತೆಯಾಗಿ ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ, ಸಾಮರಸ್ಯದ ಭಾವನೆಯನ್ನು ಮೂಡಿಸುವ ಕೆಲಸ ಮಾಡಲಾಗುತ್ತದೆ.
ಶಿಕ್ಷಣದ ಮೂಲಕ ಉತ್ತಮ ಭವಿಷ್ಯವನ್ನು ಕಾಣಬೇಕಾದ ಮುಗ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷ ಭಾವನೆ ಮೂಡಿಸುವ ಸಂಘಟನೆ ಹಾಗೂ ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆ ಕೂಡಲೇ ನಿರ್ದಾಕ್ಷಿಣ್ಯವಾದ ಕ್ರಮ ಕೈಗೊಳ್ಳಬೇಕು ಮತ್ತು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಭದ್ರತೆ ನೀಡಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now