
ಉಡುಪಿ ಜಿಲ್ಲೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಲಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ-2026 ಉತ್ಸವದ ಅಂಗವಾಗಿ ನಿರ್ಮಿಸಲಾಗಿರುವ ಆಕರ್ಷಕ ವಿದ್ಯುದ್ದೀಪಾಲಂಕಾರವನ್ನು ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರು ಶನಿವಾರ ಉದ್ಘಾಟಿಸಿದರು.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪರಿಸರದಿಂದ ಪಡುಬಿದ್ರಿ ಮೂಲಕ ಕಾಪು ಸಮುದ್ರ ತೀರದವರೆಗೆ ಕಂಗೊಳಿಸುತ್ತಿರುವ ವಿದ್ಯುದ್ದೀಪಾಲಂಕಾರವು ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ದಸರಾ ಉತ್ಸವದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ.

ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಈ ಬಾರಿಯ ಉಚ್ಚಿಲ ದಸರಾವನ್ನು ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಕ್ತಾಭಿಮಾನಿಗಳು ಹಾಗೂ ಮೊಗವೀರ ಸಮಾಜದ ಸಹಕಾರದೊಂದಿಗೆ ಆಯೋಜಿಸಲಾಗಿದೆ.
ವಿದ್ಯುದ್ದೀಪಾಲಂಕಾರ ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಡುಪಿ-ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಫೋಟೋ :ಸಚಿನ್ ಉಚ್ಚಿಲ

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now