
ಪಶ್ಚಿಮ ವಲಯದ 08ನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭವು ದಿನಾಂಕ 01/09/2026 ರಂದು ಮಣಿಪಾಲ ಮಾಹೆಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಸಾಯಂಕಾಲ 04:30 ಘಂಟೆಗೆ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಪಶ್ಚಿಮ ವಲಯದ ಪೊಲೀಸ್ ಉಪಮಹಾನಿರೀಕ್ಷಕರಾದ ಶ್ರೀ ಚೇತನ್ ಆರ್., ಐ.ಪಿ.ಎಸ್.ರವರು ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಹರಿರಾಮ್ ಶಂಕರ್, ಮಾಹೆಯ ಪ್ರೋ ಚಾನ್ಸಲರ್ ಡಾ| ಹೆಚ್.ಎಸ್. ಬಲ್ಲಾಳ್, ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶ್ರೀ ಶಿವಪ್ರಸಾದ್ ಆಳ್ವ ಕೆ., ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ, ಮಂಗಳೂರಿನ ಉಪನಿರ್ದೇಶಕಿ ಕುಮಾರಿ ಸುಜಾತ ಕೆ.ಎಂ., ಮಾಹೆಯ ಡಾ| ಅನಿಲ್ ಭಟ್, ಡಾ| ವಿನೋದ್ ಸಿ. ನಾಯಕ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಯವರು ಭಾಗವಹಿಸಿದ್ದರು.

ದಿನಾಂಕ 31/08/2026 ರಂದು ಆರಂಭಗೊಂಡ ಪೊಲೀಸ್ ಕರ್ತವ್ಯ ಕೂಟದಲ್ಲಿ ಸೈಂಟಿಫಿಕ್ ಏಡ್ಸ್ ಟು ಇನ್ವೆಸ್ಟಿಗೇಷನ್ನ 08 ವಿಭಾಗ, ಗಣಕಯಂತ್ರ ನೈಪುಣ್ಯತೆಯ 03 ವಿಭಾಗ, ಪೋಟೋಗೃಫಿ, ವೀಡಿಯೋಗೃಫಿ, ವಿದ್ವಂಸಕ ಕೃತ್ಯ ತಪಾಸಣೆಯ 04 ವಿಭಾಗ, ಪೊಲೀಸ್ ಶ್ವಾನ ದಳದ 03 ವಿಭಾಗ ಸೇರಿ ಒಟ್ಟು 20 ವಿಭಾಗಗಳಲ್ಲಿ ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಘೂ ಚಿಕ್ಕಮಗಳೂರು ಜಿಲ್ಲೆಯ ನುರಿತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿರವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಉಡುಪಿ ಜಿಲ್ಲೆಯು ಅತೀ ಹೆಚ್ಚು ಪದಕಗಳನ್ನು ಪಡೆದು ಸರ್ವಾಂಗೀಣ ತಂಡ ಪ್ರಶಸ್ತಿಯನ್ನು ಪಡಕೊಂಡಿತು. ಅತ್ಯುತ್ತಮ ಶ್ವಾನ ಪ್ರಶಸ್ತಿಯನ್ನು ಉಡುಪಿಯ ಪೊಲೀಸ್ ಶ್ವಾನ ಸ್ನೈಪರ್ ಪಡಕೊಂಡಿದ್ದು, ಇದರ ಹ್ಯಾಂಡ್ಲರ್ ಶ್ರೀ ಹರೀಶ್ ಶೆಟ್ಟಿರವರು ಪ್ರಶಸ್ತಿ ಪಡಕೊಂಡರು. ಶ್ರೀ ಚೇತನ್ ಆರ್., ಪೊಲೀಸ್ ಉಪಮಹಾನಿರೀಕ್ಷಕರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ವಿಜೇತರಿಗೆ ಅಭಿನಂದಿಸಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪದಕ ಗಳಿಸುವಂತೆ ಶುಭಹಾರೈಸಿ, ಪೊಲೀಸರು ತಮ್ಮ ದೈನಂದಿನ ಕರ್ತವ್ಯದಲ್ಲಿ ಇಂದಿನ ಸಮಾಜದಲ್ಲಿ ವೈಜ್ಞಾನಿಕ ಪದ್ದತಿಯಲ್ಲಿ ತನಿಖೆಯನ್ನು ನಡೆಸಿ, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿ ನೊಂದವರಿಗೆ ನ್ಯಾಯದೊರಕಿಸಿಕೊಡಲು ಶ್ರಮಿಸಬೇಕೆಂದು ಕರೆನೀಡಿದರು. ವಿಶೇಷ ಆಹ್ವಾನಿತರೆಲ್ಲರೂ ವಿಜೇತರಿಗೆ ಅಭಿನಂದಿಸಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪದಕ ಗಳಿಸುವಂತೆ ಶುಭಹಾರೈಸಿದರು. ಶ್ರೀ ಸೋಮಶಂಕರ್ ಎನ್., ಪೊಲೀಸ್ ನಿರೀಕ್ಷಕರು ಸ್ವಾಗತಿಸಿ, ಶ್ರೀ ಶಿವಾನಂದ, ಪೊಲೀಸ್ ಸಿಬ್ಬಂದಿ ನಿರೂಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂದನಾರ್ಪಣೆಗೈದರು. ಈ ವೇಳೆಯಲ್ಲಿ ಕಳೆದ ವರ್ಷ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪದಕಗಳಿಸಿದ ಉಡುಪಿ ಡಿ.ಎ.ಆರ್.ನ ಪೊಲೀಸ್ ಸಿಬ್ಬಂದಿ ಲೋಕೇಶ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗಾಗಿ ಪಶ್ಚಿಮ ವಲಯದ ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿಯವರಾದ ಶ್ರೀ ಗೌರೀಶ್ ಎ.ಸಿ. ರವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now