
ಮಾನವೀಯ ಸೇವೆಯೇ ರೆಡ್ ಕ್ರಾಸ್‌ನ ಧ್ಯೇಯ – ಜಯಕರ್ ಶೆಟ್ಟಿ.
ಕೋಟೇಶ್ವರ, ಜು. 23: “ರೆಡ್ ಕ್ರಾಸ್ ಕೇವಲ ಒಂದು ಸಂಸ್ಥೆಯಲ್ಲ, ಅದು ಮಾನವೀಯತೆಯ ಪ್ರತೀಕವಾಗಿದೆ. ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಸೇವಾ ಮನೋಭಾವ, ಸಮಾಜ ಸೇವೆ, ಆರೋಗ್ಯ ಜಾಗೃತಿ ಹಾಗೂ ಪ್ರಥಮ ಚಿಕಿತ್ಸೆಯ ಅರಿವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಜೂನಿಯರ್ ರೆಡ್ ಕ್ರಾಸ್ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಜಯಕರ್ ಶೆಟ್ಟಿ ಹೇಳಿದರು.
ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢಶಾಲಾ ವಿಭಾಗ) ಕೋಟೇಶ್ವರದಲ್ಲಿ ಆಯೋಜಿಸಲಾದ ಜೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರೆಡ್ ಕ್ರಾಸ್ ಸೊಸೈಟಿಯ ಉದಾತ್ತ ಉದ್ದೇಶಗಳು, ಅದರ ಸೇವಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ನಾಯಕತ್ವ ಗುಣ, ಶಿಸ್ತು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ಜೂನಿಯರ್ ರೆಡ್ ಕ್ರಾಸ್‌ನ ಮಹತ್ವವನ್ನು ವಿವರಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಸಂಯೋಜಕ ದಿನಕರ್ ಆರ್. ಶೆಟ್ಟಿ ಅವರು ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಸಂಸ್ಥೆಯ ವತಿಯಿಂದ ಶಾಲೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಶಾಲಾ ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಖಜಾಂಚಿ ಶಿವರಾಮ ಶೆಟ್ಟಿ, ಸಂಯೋಜಕ ದಿನಕರ್ ಆರ್. ಶೆಟ್ಟಿ, ಜೂನಿಯರ್ ರೆಡ್ ಕ್ರಾಸ್ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾದ 10ನೇ ತರಗತಿ ವಿದ್ಯಾರ್ಥಿನಿ ಹಮ್ದಾ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ 9ನೇ ತರಗತಿ ವಿದ್ಯಾರ್ಥಿ ಉಜ್ವಲ್ ಯು. ಮೊಗವೀರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹ ಶಿಕ್ಷಕಿ ವಿದ್ಯಾ ಅವರು ನಿರೂಪಿಸಿದರು. ಅಶ್ವಿನಿ ಸ್ವಾಗತಿಸಿ, ರಜನಿ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಜೂನಿಯರ್ ರೆಡ್ ಕ್ರಾಸ್ ಘಟಕದ ಯಶಸ್ವಿ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಪ್ರಥಮ ಚಿಕಿತ್ಸಾ ಕೌಶಲ್ಯ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಅರ್ಥಪೂರ್ಣ ಹಾಗೂ ಪ್ರೇರಣಾದಾಯಕವಾಗಿ ನೆರವೇರಿತು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now