
ಉಡುಪಿ : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಕನಿಷ್ಠ ಮಾಸಿಕ ವೇತನವನ್ನು ₹25,000ಕ್ಕೆ ಹೆಚ್ಚಿಸಿ, ಸೇವಾ ಭದ್ರತೆ ಕಲ್ಪಿಸುವುದರ ಜೊತೆಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪತ್ರ ಬರೆದು ಮನವಿ ಮಾಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡುವಲ್ಲಿ ರಾಜ್ಯದಾದ್ಯಂತ ಸಾವಿರಾರು ಅತಿಥಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಸ್ತುತ ದಿನಕ್ಕೆ ₹400ರಂತೆ ತಿಂಗಳಿಗೆ ಕೇವಲ ₹12,000 ಸಂಭಾವನೆ ನೀಡಲಾಗುತ್ತಿದ್ದು, ಇಂದಿನ ಜೀವನ ನಿರ್ವಹಣೆಗೆ ಇದು ಸಾಕಾಗುತ್ತಿಲ್ಲ. ಅಲ್ಲದೆ, ಹಲವು ತಿಂಗಳುಗಳ ಕಾಲ ವೇತನ ಪಾವತಿಯಾಗದೆ ವಿಳಂಬವಾಗುತ್ತಿರುವುದು ಅತಿಥಿ ಶಿಕ್ಷಕರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಅತಿಥಿ ಶಿಕ್ಷಕರಿಗೆ ಸರ್ಕಾರ ವರ್ಷದ 10 ತಿಂಗಳು ಮಾತ್ರ ವೇತನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಖಾಯಂ ಶಿಕ್ಷಕರಂತೆ ಏಪ್ರಿಲ್ ಹಾಗೂ ಮೇ ತಿಂಗಳ ವೇತನವನ್ನು ನೀಡಲು ಕ್ರಮ ವಹಿಸಬೇಕು.
ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ, ಉದ್ಯೋಗದ ಖಾತರಿ ಹಾಗೂ ಪಿಎಫ್, ಇಎಸ್ಐ ಸೇರಿದಂತೆ ಅಗತ್ಯ ಸಾಮಾಜಿಕ ಭದ್ರತಾ ಸೌಲಭ್ಯಗಳಿಲ್ಲದಿರುವುದರಿಂದ ಅವರು ನಿರಂತರ ಅನಿಶ್ಚಿತತೆಯ ನಡುವೆ ಸೇವೆ ಸಲ್ಲಿಸುವಂತಾಗಿದೆ. ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರಿಗೆ ಗೌರವಯುತ ವೇತನ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ರಾಜ್ಯದ ಅತಿಥಿ ಶಿಕ್ಷಕರ ಕನಿಷ್ಠ ಮಾಸಿಕ ವೇತನವನ್ನು ₹25,000ಕ್ಕೆ ಹೆಚ್ಚಿಸುವುದು, ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿಸುವ ವ್ಯವಸ್ಥೆ ಜಾರಿಗೊಳಿಸುವುದು ಹಾಗೂ ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ಅವರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಅಲ್ಲದೆ, ಖಾಯಂ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅತಿಥಿ ಶಿಕ್ಷಕರ ಸೇವಾನುಭವವನ್ನು ಪರಿಗಣಿಸಿ ಸೂಕ್ತ ಆದ್ಯತೆ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now