
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ರಾಜಧಾನಿ ದೆಹಲಿಯಲ್ಲಿ ಭಾರಿ ಗದ್ದಲ ಮತ್ತು ಹೈಡ್ರಾಮಾ ಸೃಷ್ಟಿಯಾಗಿದೆ.
ನೀಟ್ (NEET) ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ “ಕಾಕ್ರೋಚ್ ಜನತಾ ಪಾರ್ಟಿ” (ಸಿಜೆಪಿ) ಕಾರ್ಯಕರ್ತರು ಹಮ್ಮಿಕೊಂಡಿದ್ದ ‘ಸಂಸತ್ ಚಲೋ’ ಪ್ರತಿಭಟನಾ ಮೆರವಣಿಗೆಯು ಪೊಲೀಸರೊಂದಿಗೆ ತೀವ್ರ ಘರ್ಷಣೆಗೆ ಕಾರಣವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ್ದು, ಸ್ಥಳದಲ್ಲಿ ಭಾರೀ ಗೊಂದಲದ ವಾತಾವರಣ ಉಂಟಾಗಿದೆ.
ಈ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರು ಭಾನುವಾರವೇ ಅನುಮತಿ ನಿರಾಕರಿಸಿದ್ದರು. ಅಲ್ಲದೆ ರಾಜಧಾನಿಯ ಪ್ರಮುಖ ಭಾಗಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರುವುದನ್ನು ನಿಷೇಧಿಸಿ ಕಠಿಣ ಆದೇಶ ಜಾರಿಗೊಳಿಸಿದ್ದರು. ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಪೂರ್ವಾನುಮತಿ ಪಡೆದು ಜಂತರ್ ಮಂತರ್ನಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶವಿದ್ದು, ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕ್ಯಾಲಿ, ಮೆರವಣಿಗೆ ಅಥವಾ ಸಭೆಗಳನ್ನು ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದರು. ಈ ನಿಯಮಗಳನ್ನು ಮೀರಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ನೆಮ್ಮದಿಯನ್ನು ಕಾಪಾಡಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ಇಂತಹ ಅನಧಿಕೃತ ಮೆರವಣಿಗೆಗಳಲ್ಲಿ ಭಾಗವಹಿಸಬಾರದು ಎಂದು ಮನವಿ ಮಾಡಿದ್ದರು.
ಆದಾಗ್ಯೂ, ನಿಷೇಧಾಜ್ಞೆಯನ್ನು ಲೆಕ್ಕಿಸದೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮುನ್ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಉಭಯ ಪಕ್ಷಗಳ ನಡುವೆ ತಳ್ಳಾಟ-ನೂಕಾಟ ನಡೆದು ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಲಾಠಿ ಬೀಸಬೇಕಾಯಿತು. ಭದ್ರತಾ ದೃಷ್ಟಿಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಮೆಟ್ರೋ ರೈಲು ನಿಗಮವು ರಾಜೀವ್ ಚೌಕ್, ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಮತ್ತು ಸೇವಾ ತೀರ್ಥ ಸೇರಿದಂತೆ ಒಟ್ಟು ಐದು ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಸಾರ್ವಜನಿಕರಿಗಾಗಿ ತಾತ್ಕಾಲಿಕವಾಗಿ ಮುಚ್ಚಿದೆ. ಮುಂದಿನ ಆದೇಶ ಬರುವವರೆಗೂ ಈ ನಿಲ್ದಾಣಗಳು ಮುಚ್ಚಿರುತ್ತವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯ ಇಡೀ ದೆಹಲಿಯ ಪ್ರಮುಖ ವಲಯಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now