
ದೋಹಾ: ಕತಾರ್ನಲ್ಲಿರುವ ಕನ್ನಡ ಮಾತನಾಡುವ ಅನಿವಾಸಿ ಭಾರತೀಯರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಕಾಂಕ್ಷೆಗಳಿಗೆ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಂತಾಗಿದೆ. ಕರ್ನಾಟಕ ಸಂಘ ಕತಾರ್ (ಕೆ ಎಸ್ ಕ್ಯೂ) ನೂತನ ವ್ಯವಸ್ಥಾಪನಾ ಸಮಿತಿಯು ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿಗಳಾದ (ಶಿಕ್ಷಣ ಮತ್ತು ಸಾಂಸ್ಕೃತಿಕ) ಹರೀಶ್ ಪಾಂಡೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಭಾಷಾ ತರಗತಿಗಳ ಆರಂಭಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಭರವಸೆ ಲಭಿಸಿದೆ.

ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ, 2026-28ನೇ ಸಾಲಿನ ನೂತನ ಸಮಿತಿಯು ತನ್ನ ಪದಾಧಿಕಾರಿಗಳನ್ನು ಪರಿಚಯಿಸಿತಲ್ಲದೆ, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಕೈಗೊಳ್ಳಲಿರುವ ಶೈಕ್ಷಣಿಕ ಯೋಜನೆಗಳು, ವಿದ್ಯಾರ್ಥಿ ಒಕ್ಕೂಟ ಹಾಗೂ ಕನ್ನಡ ಭಾಷಾ ತರಗತಿಗಳ ಚೌಕಟ್ಟಿನ ಕುರಿತು ವಿವರವಾದ ಸುದೀರ್ಘ ಚರ್ಚೆ ನಡೆಸಿತು.
ಈ ಸಭೆಯು ಕನ್ನಡಿಗರಿಗೆ ಅತ್ಯಂತ ಸಕಾರಾತ್ಮಕ ಫಲಿತಾಂಶವನ್ನು ನೀಡಿದ್ದು, ಮುಂದಿನ ಪೀಳಿಗೆಯ ಮಕ್ಕಳಲ್ಲಿ ಸಾಂಸ್ಕೃತಿಕ ಬೇರುಗಳನ್ನು ಉಳಿಸುವ ಅಗತ್ಯತೆಯನ್ನು ಗುರುತಿಸಿದ ಪ್ರಥಮ ಕಾರ್ಯದರ್ಶಿಗಳಾದ ಹರೀಶ್ ಪಾಂಡೆ ಅವರು, ಕತಾರ್ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪಠ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲು ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಂಬಲವನ್ನು ನೀಡುವುದಾಗಿ ಅಧಿಕೃತವಾಗಿ ಪ್ರಕಟಿಸಿದರು. ಈ ಪ್ರಮುಖ ನಿರ್ಧಾರದಿಂದಾಗಿ ಅನಿವಾಸಿ ವಿದ್ಯಾರ್ಥಿಗಳಿಗೆ ಶಾಲೆಗಳ ಮುಖ್ಯವಾಹಿನಿಯಲ್ಲೇ ವ್ಯವಸ್ಥಿತವಾಗಿ ಕನ್ನಡ ಕಲಿಯುವ ಉತ್ತಮ ಅವಕಾಶ ಮುಕ್ತವಾಗಲಿದೆ.
ಇದರೊಂದಿಗೆ, ಮುಂಬರುವ ದಿನಗಳಲ್ಲಿ ಕರ್ನಾಟಕ ಸಂಘ ಕತಾರ್ (ಕೆ ಎಸ್ ಕ್ಯೂ) ಹಮ್ಮಿಕೊಳ್ಳಲಿರುವ ಎಲ್ಲಾ ಶೈಕ್ಷಣಿಕ, ಸಾಮಾಜಿಕ ಹಾಗೂ ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳಿಗೂ ರಾಯಭಾರ ಕಚೇರಿಯು ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಹರೀಶ್ ಪಾಂಡೆ ಅವರು ಆಶ್ವಾಸನೆ ನೀಡಿದರು. ಭಾರತದ ವೈವಿಧ್ಯಮಯ ಪರಂಪರೆಯನ್ನು ಆಚರಿಸುವ ಇಂತಹ ತಳಮಟ್ಟದ ಸಮುದಾಯದ ಪ್ರಯತ್ನಗಳಿಗೆ ರಾಯಭಾರ ಕಚೇರಿಯು ಸದಾ ಪ್ರೋತ್ಹಾಹ ನೀಡುತ್ತದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು.
ರಾಯಭಾರ ಕಚೇರಿಯ ಈ ಸಕಾರಾತ್ಮಕ ಮತ್ತು ಪ್ರಗತಿಪರ ನಿರ್ಧಾರಕ್ಕೆ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಕಾರ್ಯಕಾರಿ ಸಮಿತಿಯು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿತು. ಅತ್ಯಂತ ಯಶಸ್ವಿಯಾಗಿ ಮೂಡಿಬಂದ ಈ ಮಾತುಕತೆಯ ಕೊನೆಯಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹರೀಶ್ ಪಾಂಡೆ ಅವರಿಗೆ ಸಾಂಪ್ರದಾಯಿಕ ಶಲ್ಯ ಹೊದಿಸಿ, ನೆನಪಿನ ಕಾಣಿಕೆ ನೀಡಿ ಹೃತ್ಪೂರ್ವಕವಾಗಿ ಗೌರವಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now