
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸಹಿತ ರಾಜ್ಯದಾದ್ಯಂತ ಮಳೆ ಕೊರತೆ ಎದುರಾದ ಪರಿಣಾಮ ಮಳೆಗಾಲ ದಲ್ಲೂ 16 ಜಿಲ್ಲೆಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು ತಾಪಮಾನ ದಾಖಲಾಗುತ್ತಿದೆ.
5 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಜೂ. 1ರಿಂದ ಜು. 14ರ ವರೆಗೆ ಶೇ.29 ಮಳೆ ಕೊರತೆ ಇದೆ. ಹೀಗಾಗಿ ಎಲ್ಲೆಡೆ ಬೇಸಗೆಯ ಅನುಭವ ಆಗುತ್ತಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿ.ಸೆ. ಇದ್ದರೆ, ಉಳಿದ ಜಿಲ್ಲೆಗಳಲ್ಲಿ 30 ಡಿ.ಸೆ.ಯಿಂದ 38 ಡಿ.ಸೆ.ವರೆಗೆ ಏರಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3ರಿಂದ 5 ಡಿ.ಸೆ. ತಾಪಮಾನ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ವಾಡಿಕೆಗಿಂತ 4.4 ಡಿ.ಸೆ. ತಾಪಮಾನ ಹೆಚ್ಚಾದರೆ, ಬೀದರ್ನಲ್ಲಿ ಇದರ ಪ್ರಮಾಣ 7.4 ಡಿ.ಸೆ. ಇದೆ. ಕಲಬುರಗಿಯಲ್ಲಿ ವಾಡಿಕೆಗಿಂತ 5.9 ಡಿ.ಸೆ. ಏರಿಕೆ ಕಂಡು ಬಂದಿದೆ.
ಚಾಮರಾಜನಗರದಲ್ಲಿ ಶೇ.4, ಬೆಂಗಳೂರು ಗ್ರಾಮಾಂತರ ಶೇ.6, ಬಾಗಲಕೋಟೆ ಶೇ. 1, ಚಿಕ್ಕಬಳ್ಳಾಪುರ ಶೇ.14, ಬೆಳಗಾವಿ ಜಿಲ್ಲೆಯಲ್ಲಿ ಶೇ.34ರಷ್ಟು ಹೆಚ್ಚುವರಿ ಮಳೆಯಾಗಿದೆ. ಬೆಳಗಾವಿ ಹೊರತುಪಡಿಸಿ ಉಳಿದ ಈ 4 ಜಿಲ್ಲೆಗಳಲ್ಲೂ ಮುಂದಿನ 2 ವಾರದೊಳಗೆ ಮಳೆ ಕೊರತೆ ಎದುರಾಗುವ ಲಕ್ಷಣವಿದೆ. ಸದ್ಯದಲ್ಲೇ ಇಡೀ ರಾಜ್ಯದಲ್ಲಿ ಬರದ ಛಾಯೆ ಆವರಿಸುವ ಭೀತಿ ಎದುರಾಗಿದೆ. ಮಂಗಳವಾರ ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿತ್ತು. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದರೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now