ಆ.28; ಮುಂಬಯಿಯಲ್ಲಿ ‘ಶ್ರೀ ವಿಶ್ವೇಶ ಯಕ್ಷಜ್ಞಾನ ಸಭಾ’ ಉದ್ಘಾಟನೆ

ಆ.28; ಮುಂಬಯಿಯಲ್ಲಿ ‘ಶ್ರೀ ವಿಶ್ವೇಶ ಯಕ್ಷಜ್ಞಾನ ಸಭಾ’ ಉದ್ಘಾಟನೆ
????????????????????????????????????
0Shares

ಮುಂಬಯಿ, ಜು.11: ಕೃಷ್ಣೈಕ್ಯ  ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಅಭಿಮಾನಿ ಶಿಷ್ಯರಾಗಿ  ಮುಂಬಯಿಯಲ್ಲಿ ನೆಲೆಸಿರುವ ಕಲಾಪೋಷಕರು ಒಂದಾಗಿ, ಯಕ್ಷಗಾನದ ವಾಚಿಕ ವೈಭವವನ್ನು ಪಸರಿಸುವ ಸಲುವಾಗಿ “ಶ್ರೀ ವಿಶ್ವೇಶ ಯಕ್ಷಜ್ಞಾನ ಸಭಾ” ಎಂಬ ನೂತನ ಸಂಘಟನೆಯನ್ನು ಸ್ಥಾಪಿಸುತ್ತಿದ್ದಾರೆ. ಈ ಸಂಸ್ಥೆಯ ಮೊಟ್ಟಮೊದಲ ಹೆಜ್ಜೆಯಾಗಿ, ಸಂಸ್ಥೆಯ ಉದ್ಘಾಟನೆಯೊಂದಿಗೆ ಮೂರು ದಿನಗಳ ಭವ್ಯ “ಶ್ರೀ ವಿಶ್ವೇಶ ಜ್ಞಾನಸತ್ರ” ತಾಳಮದ್ದಲೆ ಸರಣಿಯನ್ನು ಆಯೋಜಿಸಲಾಗಿದೆ. ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯಲ್ಲಿ ತ್ರಿದಿನಗಳ ಕಾಲ ವಿಭಿನ್ನ ಪ್ರಸಂಗಗಳು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಜರುಗಲಿವೆ.

ಇದೇ ಬರುವ  ಆಗಸ್ಟ್ 28ನೇ ಶುಕ್ರವಾರ ಅಪರಾಹ್ನ 3:30 ಗಂಟೆಗೆ ಶ್ರೀ ಪೇಜಾವರ ಮಠ, ಸಾಂತಾಕ್ರೂಜ್, ಮುಂಬಯಿ ಇಲ್ಲಿ ಸಂಸ್ಥೆಯ ಹಾಗೂ ತಾಳಮದ್ದಲೆ ಸರಣಿಯ ಭವ್ಯ ಉದ್ಘಾಟನೆ ನಡೆಸಲಾಗುವುದು. ನಂತರ ‘ಪ್ರಣಯ ಪರಿತ್ಯಕ್ತೆ’ ಪ್ರಸಂಗ ಜರುಗಲಿದೆ. ಆಗಸ್ಟ್ 29ನೇ ಶನಿವಾರ ಅಪರಾಹ್ನ 3:30 ಗಂಟೆಗೆ ನವೋದಯ ಇಂಗ್ಲಿಷ್ ಹೈಸ್ಕೂಲ್ ಸಭಾಗೃಹ, ಶಿವಾಜಿನಗರ, ಮುಲುಂಡ್ ಪಶ್ಚಿಮ ಇಲ್ಲಿ ‘ವೈಕುಂಠ ಧಾಮ’ ಪ್ರಸಂಗ ಹಾಗೂ ಆಗಸ್ಟ್ 30ನೇ ಭಾನುವಾರ ಅಪರಾಹ್ನ 1:30 ಗಂಟೆಗೆ ದಿ. ಕೋಸ್ಟಲ್ ತವಾ ರೆಸಾರ್ಟ್‌ನ ಸಭಾಗೃಹ,  ರಾಷ್ಟ್ರೀಯ ಹೆದ್ದಾರಿ ಸಮೀಪ ಭಿವಂಡಿ ಇಲ್ಲಿ ಸಮಾರೋಪ ಸಮಾರಂಭ ಮತ್ತು ‘ರಾಜತಂತ್ರ’ ಪ್ರಸಂಗ ಜರುಗಲಿದೆ. ಕಲಾ ಜಗತ್ತಿನ ದಿಗ್ಗಜರ ಒಕ್ಕೂಟ ಈ ಜ್ಞಾನಸತ್ರದಲ್ಲಿ ಕರಾವಳಿ ಮತ್ತು ಘಟ್ಟದ ಮೇಲಿನ ಪ್ರಸಿದ್ಧ ವಿದ್ವಾಂಸರು ಹಾಗೂ ಸ್ಥಳೀಯ ಪ್ರತಿಭೆಗಳು ಭಾಗವಹಿಸಲಿದ್ದಾರೆ.

 ಅರ್ಥಧಾರಿಗಳು:
ವಾಸುದೇವ ರಂಗಾಭಟ್ ಮಧೂರು (ಆಟಕೂಟಗಳಿಂದ ಕಲಾಭಿಮಾನಿಗಳ ಮನ್ನಣೆ ಗಳಿಸಿರುವ ಇವರು, ಪ್ರಕೃತ ಶ್ರೀ ಹನುಮಗಿರಿ ಮೇಳದ ಪ್ರಧಾನ ಕಲಾವಿದರು. ಕಾನೂನು ಪದವೀಧರರಾಗಿದ್ದು, ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ). ವಿದ್ವಾನ್ ಡಾ| ಸಂಕದಗುಂಡಿ ಗಣಪತಿ ಭಟ್ಟ (ಮೂಲತಃ ಉತ್ತರ ಕನ್ನಡದವರಾಗಿದ್ದು, ಪ್ರಸ್ತುತ ಮೈಸೂರು ನಿವಾಸಿ. ಸಂಸ್ಕೃತ ವಿದ್ವತ್ ಪದವೀಧರರಾದ ಇವರು ವೃತ್ತಿಯಿಂದ ಉಪನ್ಯಾಸಕರು. “ರಾಮಾಯಣದಲ್ಲಿ ಧರ್ಮಶಾಸ್ತ್ರೀಯ ಅಂಶಗಳು” ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದು, ಪ್ರಸ್ತುತ ಅರ್ಥಧಾರಿಯಾಗಿ ಪ್ರಸಿದ್ಧಿಯ ಶಿಖರದಲ್ಲಿದ್ದಾರೆ.

ಹರೀಶ ಬಳಂತಿಮುಗರು (ಮೂಲತಃ ಕೃಷಿಕರಾದ ಇವರು ಶ್ರೀ ಹನುಮಗಿರಿ ಮೇಳದ ಪ್ರಬಂಧಕರು. ಅರ್ಥಗಾರಿಕೆಯ ಜೊತೆಗೆ ಹವ್ಯಾಸಿಯಾಗಿ ಭಾಗವತಿಕೆಯ ಅನುಭವ ಹೊಂದಿದ್ದು, ಬೆಳೆಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದಾರೆ). ಸುರೇಶ್ ಶೆಟ್ಟಿ ನಂದ್ರೊಳ್ಳಿ (ಮುಂಬಯಿಯಲ್ಲಿ ಸದ್ಯ ನೆಲೆಸಿರುವ ಇವರು,  ಉದಯೋನ್ಮುಖ ಪ್ರತಿಭೆಯಾಗಿದ್ದು, ಕಲಾವಿದರಾಗಿ ಹಾಗೂ ಸಂಘಟನಾ ಸಹಾಯಿಯಾಗಿ ಈ ತಂಡದ ಜೊತೆಗಿದ್ದಾರೆ).

ಹಿಮ್ಮೇಳ ವಾದಕರಲ್ಲಿ ಭಾಗವತಿಕೆಯಲ್ಲಿ ಉಭಯ ತಿಟ್ಟುಗಳಲ್ಲಿ ಸರಾಗವಾಗಿ ಹಾಡಬಲ್ಲ ಪರಿಣತರಾದ ಹಿರಿಯ, ಅನುಭವಿ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಇವರು ಈ ಸರಣಿಯಲ್ಲಿ ಅಪೂರ್ವವಾಗಿ ಬಡಗು ಶೈಲಿಯ ಭಾಗವತಿಕೆಯಿಂದ ನಮ್ಮನ್ನು ರಂಜಿಸಲಿದ್ದಾರೆ. ಪ್ರತಿಭಾವಂತ ಭಾಗವತರಾದ ಮಹೇಂದ್ರ ಶೆಟ್ಟಿ ನಂದ್ರೊಳ್ಳಿ ಹಾಗೂ ರಾಘವೇಂದ್ರ ಭಟ್ ಮಾಳ  ಇವರು ಭಾಗವತಿಕೆಯಲ್ಲಿ ಪೊಲ್ಯದವರಿಗೆ ಸಾಥ್ ನೀಡಲಿದ್ದರೆ. ಇವರಿಬ್ಬರೂ ಈಗಾಗಲೇ ಮಹಾನಗರದ ಹಲವೆಡೆಗಳಲ್ಲಿ ತಮ್ಮ ಪ್ರತಿಭೆಯಿಂದ ಪ್ರಸಿದ್ಧರಾದವರು.

ಹಿಮ್ಮೇಳದಲ್ಲಿ  ಪ್ರಸಿದ್ಧ ಮದ್ದಳೆಗಾರ ಎ.ಪಿ.ಫಾಟಕ್ ಮದ್ದಲೆಗಾರರಾಗಿ ಭಾಗವಹಿಸಲಿದ್ದು, ಬಹುತೇಕ ಎಲ್ಲಾ ಹಿರಿಕಿರಿಯರೊಂದಿಗೆ ಸಹಾವಾದಕರಾಗಿ ಅನೇಕ ದಶಕಗಳ ಅನುಭವ ಸಂಪನ್ನರು. ಯಕ್ಷಗಾನದ ಸರ್ವಾಂಗಗಳನ್ನೂ ಬಲ್ಲ ಇವರು ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಗಳ ಮೂಲಕವಾಗಿಯೂ ಗಮನಾರ್ಹರು. ಚೆಂಡೆವಾದಕರಾಗಿ ಶ್ರೀನಿವಾಸ ಪ್ರಭು ಕುಂದಾಪುರ ಭಾಗವಹಿಸಲಿದ್ದು,  ಇವರು ತಮ್ಮ ಆಕರ್ಷಕ ವಾದನ ಪರಿಣತಿಯಿಂದಾಗಿ ಅನೇಕ ವೃತ್ತಿ ಮೇಳಗಳಲ್ಲಿ ಸಂಚರಿಸಿದವರು.

ಈ ಸಂಘಟನೆ ಹಾಗೂ ಸರಣಿಗೆ ಅನುಗ್ರಾಹಕ ಶಕ್ತಿಯಾಗಿರುವವರು ಪ್ರಕೃತ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು.  ಹಿಂದಿರುವ ಸಂಕಲ್ಪ ಶಕ್ತಿ   ಶ್ರೀ ಸೀತಾರಾಮ ಅಳ್ವ, ಶ್ರೀ ಮಾಳ ರಾಘವೇಂದ್ರ ಭಟ್ ಇವರದ್ದು. ಮಿಜಾರು ಸೀತಾರಾಮ ಆಳ್ವ ಅವರು ಮೂಡಬಿದ್ರೆಯ ಶೈಕ್ಷಣಿಕ ಕ್ರಾಂತಿಯ ಹರಿಕಾರರಾದ ಡಾ| ಎಂ. ಮೋಹನ ಆಳ್ವ ಅವರ ಸೋದರರಾಗಿದ್ದು, ಉದ್ಯಮಿಗಳಾದ ಇವರು ಕಲಾಪೋಷಕರಾಗಿ, ದಾನಿಗಳಾಗಿ ಪ್ರಸಿದ್ಧರು. ಶ್ರೀ ಮಾಳ ರಾಘವೇಂದ್ರ ಭಟ್ಟರು ಪ್ರಸಿದ್ಧ ವೈದಿಕ ವಿದ್ವಾಂಸ ಮಾಳ ಶ್ರೀನಿವಾಸ ಭಟ್ಟರ ಸುಪುತ್ರ. ಹೋಟೆಲ್ ಉದ್ಯಮಿಯಾಗಿರುವ ಇವರು ಆಕರ್ಷಕ ಕಂಠಮಾಧುರ್ಯ ಹೊಂದಿರುವ ಯುವ ಭಾಗವತರೂ ಹೌದು. ಇವರೀರ್ವರು  ಸುರೇಶ ಶೆಟ್ಟಿ ನಂದ್ರೊಳ್ಳಿ ಅವರ ಸಾಂಗತ್ಯದಲ್ಲಿ ಈ ವಿಭಿನ್ನ ,ವಿಶಿಷ್ಟ ಉಪಕ್ರಮಕ್ಕೆ ಮುಂದಾಗುತ್ತಿದ್ದಾರೆ.

ಮುಂಬೈ ಮಹಾನಗರದ ಸಮಸ್ತ ಕಲಾಭಿಮಾನಿಗಳು, ದಾನಿಗಳು ಮತ್ತು ಕಲಾಪೋಷಕರು ಈ ಮೂರೂ ದಿನಗಳ “ಶ್ರೀವಿಶ್ವೇಶ ಜ್ಞಾನಸತ್ರ” ತಾಳಮದ್ದಲೆ ಸರಣಿಗೆ ಸರ್ವವಿಧದ ಪ್ರೋತ್ಸಾಹ ಹಾಗೂ ಉತ್ತೇಜನ ನೀಡುವರೆಂಬ ಭರವಸೆಯನ್ನು ಸಂಘಟಕರು ಹೊಂದಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now