ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅಮೂಲ್ಯ: ಸಚಿವ ಯು ಟಿ ಖಾದರ್

ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅಮೂಲ್ಯ: ಸಚಿವ ಯು ಟಿ ಖಾದರ್
0Shares

ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ವೈದ್ಯರ ದಿನಾಚರಣೆ

ಉಡುಪಿ: ತಮ್ಮ ವೈಯಕ್ತಿಕ ಬದುಕಿಗಿಂತ ಸಮಾಜದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಿಸ್ವಾರ್ಥ ಸೇವೆಯಿಂದ ಅನೇಕ ಜೀವಗಳನ್ನು ಉಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅತ್ಯಂತ ಅಮೂಲ್ಯವಾದುದು ಎಂದು ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರಾದ ಯು ಟಿ ಖಾದರ್ ಅಭಿಪ್ರಾಯ ಪಟ್ಟರು.

ಅವರು ಭಾನುವಾರ ಉಡುಪಿ ಶೋಕಮಾತಾ ಚರ್ಚಿನ ಆವೆ ಮರಿಯಾ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವೈದ್ಯರೂ ಕೂಡ ಜಗತ್ತಿನಲ್ಲಿ ಕ್ರಾಂತಿಕಾರ ಬದಲಾವಣೆ ತರಲು ಸಾಧ್ಯವಿದ್ದು ಪ್ರತಿಯೊಬ್ಬ ರೋಗಿಯ ಗೌರವಕ್ಕೆ ಧಕ್ಕೆಯಾಗದಂತೆ ಸೇವೆ ನೀಡಬೇಕಾದ ಜವಾಬ್ದಾರಿ ಅವರ ಮೇಲಿದೆ. ವೈದ್ಯ ವೃತ್ತಿ ಅತ್ಯಂತ ಪವಿತ್ರ ಹಾಗೂ ಗೌರವಯುತವಾಗಿದ್ದು ವೈದ್ಯರು ಜನರಲ್ಲಿ ಉತ್ತಮವಾದ ಆಹಾರ ಪದ್ದತಿಯ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆದಲ್ಲಿ ಆರೋಗ್ಯಯುತ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ ಈ ನಿಟ್ಟಿನಲ್ಲಿ ವೈದ್ಯ ಸಮುದಾಯ ಹೆಚ್ಚು ಆಸಕ್ತಿ ತೋರಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ ಹಿಂದುಳಿದ ಹಾಗೂ ಬಡವರನ್ನು ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಾಗಿದ್ದು ಈ ನಿಟ್ಟಿನಲ್ಲಿ ಮಾಹೆ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿದೆ. ಬಡವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿರುವ ಸಂಸ್ಥೆ ಆರೋಗ್ಯ ಕಾರ್ಡ್ ಮೂಲಕ ರಿಯಾಯತಿ ದರದ ಸೇವೆ ನೀಡುತ್ತಿದ್ದು ಇದನ್ನು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ನೋಡಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ವಹಿಸಿದ್ದು ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ ಬದಲಿಗೆ ಅದೊಂದು ಪವಿತ್ರ ಹಾಗೂ ಮಹಾನ್ ಸೇವೆಯಾಗಿದೆ. ಹಗಲಿರುಳೂ ರೋಗಿಗಳ ಸೇವೆ ಮಾಡುವ ವೈದ್ಯರು ಸಮಾಜದ ಬೆನ್ನೆಲೆಬುಗಾಗಿದೆ. ಧರ್ಮಪ್ರಾಂತ್ಯದಲ್ಲಿ ವೈದ್ಯರು ನೀಡುವ ಸೇವೆಗೆ ಕೃತಜ್ಞತೆ ಸಲ್ಲಿಸಿದ ಅವರು ಮುಂದೆಯೂ ಇದೇ ರೀತಿಯ ಸೇವೆ ಸಮಾಜಕ್ಕೆ ನೀಡುವ ಕೆಲಸ ವೈದ್ಯರಿಂದ ನಡೆಯಲಿ ಎಂದರು.

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಮೂಲಕ ಸಂತೆಕಟ್ಟೆ ಗೊರೆಟ್ಟಿ ಆಸ್ಪತ್ರೆಯಲ್ಲಿ ನೂತನ ದಂತ ಚಿಕಿತ್ಸಾ ವಿಭಾಗ ಹಾಗೂ ಮಧುಮೇಹ ತಪಾಸಣಾ ಘಟಕದ ಉದ್ಘಾಟನೆ ನೆರವೇರಿಸಲಾಯಿತು. ಎರಡು ಆರೋಗ್ಯ ಸಂಸ್ಥೆಗಳಿಗೆ ಇಸಿಜಿ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಡಾ. ಜಸಿಂತಾ ಡಿಸೋಜಾ ದಿಕ್ಸೂಚಿ ಭಾಷಣ ಮಾಡಿದರು.

ಇದೇ ವೇಳೆ 2027 ರ ಸಾಲಿನ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನೊಂದಣಿ ಅಭಿಯಾನಕ್ಕೆ ಡಾ. ಎಚ್ ಎಸ್ ಬಲ್ಲಾಳ್ ಚಾಲನೆ ನೀಡಿದರು. ವಲಯಗಳ ನಿರ್ದೇಶಕರು ಹಾಗೂ ಸಂಚಾಲಕರು, ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಕುಲಪತಿ ವಂ|ಸ್ಟೀಫನ್ ಡಿಸೋಜಾ, ಆರೋಗ್ಯ ಇಲಾಖೆಯ ಡಾ. ನಾಗರತ್ನ ಶಾಸ್ತ್ರಿ. ಉಡುಪಿ ಶೋಕ ಮಾತಾ ದೇವಾಲಯದ ಸಹಾಯಕ ಧರ್ಮಗುರು ವಂ|ಲಿಯೊ ಪ್ರವೀಣ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.

ಆರೋಗ್ಯ ಆಯೋಗದ ನಿರ್ದೇಶಕಿ ಹಿಲ್ಡಾ ಕರ್ನೆಲಿಯೋ ಸ್ವಾಗತಿಸಿ, ಕಾರ್ಯದರ್ಶಿ ಡಾ. ರೆನ್ ಡಾಯಸ್ ವಂದಿಸಿದರು. ಡಾ. ಸೋನಿ ಡಿಕೊಸ್ತಾ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now