ತ್ರಾಸಿ ಅಪಘಾತ: ಗಾಯಾಳು ಬೈಕ್ ಸವಾರ ಚಿಕಿತ್ಸೆ ಫಲಿಸದೆ ನಿಧನ

ತ್ರಾಸಿ ಅಪಘಾತ: ಗಾಯಾಳು ಬೈಕ್ ಸವಾರ ಚಿಕಿತ್ಸೆ ಫಲಿಸದೆ ನಿಧನ
0Shares

ಕುಂದಾಪುರದ ತ್ರಾಸಿ ಬೀಚ್ ಸಮೀಪ ಸೋಮವಾರ ಸಂಭವಿಸಿದ್ದ ಎರಡು ದ್ವಿಚಕ್ರ ವಾಹನಗಳ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಪಡುಕೋಣೆ ಹಡವು ನಿವಾಸಿ ಪೆಟ್ರಿಕ್‌ ವಾಸ್‌ (63) ಎಂದು ಗುರುತಿಸಲಾಗಿದೆ.

ಪೆಟ್ರಿಕ್‌ ವಾಸ್‌ ಅವರು ಹಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗ ನಿರ್ವಹಿಸಿ, ಸುಮಾರು ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ್ದರು. ಬಳಿಕ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದರು. ಸೋಮವಾರ ಸಂಬಂಧಿಕರನ್ನು ಭೇಟಿಯಾಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ತ್ರಾಸಿ ಬೀಚ್ ಬಳಿಯ ಅರಮ ದೇವಸ್ಥಾನದ ಎದುರು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಭಟ್ಕಳದ ಸಣಭಾವಿ ನಿವಾಸಿ ದೀಪಕ್ ನಾಗಪ್ಪ ನಾಯ್ಕ (23) ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಪೆಟ್ರಿಕ್ ವಾಸ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅವರ ಪುತ್ರಿಯೂ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now