
ಉಡುಪಿ : ವಿಜಯ ವೀರ ಸಂಘ, ಚಿಟ್ಪಾಡಿ-ಬೈಲೂರು ಉಡುಪಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಪಶುವೈದ್ಯಕೀಯ ಪಾಲಿಕ್ಲಿನಿಕ್, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಕು ನಾಯಿ ಹಾಗೂ ಬೀದಿ ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ಶಿಬಿರ ಕಾರ್ಯಕ್ರಮವು ವಿಜಯ ವೀರ ಸಂಘದ ವಠಾರದಲ್ಲಿ 28ರಂದು ಬೆಳಿಗ್ಗೆ 8.30 ಗಂಟೆಯಿಂದ 12.30 ಗಂಟೆಯ ತನಕ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಪಶು ಸಂಗೋಪನೆ ಇಲಾಖೆಯ ಮುಖ್ಯಸ್ಥರಾದ ಡಾ. ಬಾಬಣ್ಣ ಪೂಜಾರಿ, ಡಾ. ಪ್ರಶಾಂತ್ ಶೆಟ್ಟಿ, ಡಾ. ರೆಡ್ಡಪ್ಪ ಹಾಗೂ ವಿಜಯ ವೀರ ಸಂಘದ ಅಧ್ಯಕ್ಷರಾದ ಡೆನ್ನೀಸ್ ಡಿ’ಸೋಜಾ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಸಾದ್‌ರಾಜ್ ಕಾಂಚನ್ ಅವರು, ದೊಡ್ಡ ಮೊತ್ತದ ಧನಸಹಾಯವನ್ನು ಸ್ಥಳದಲ್ಲಿಯೇ ನೀಡಿ ವಿಜಯ ವೀರ ಸಂಘದ ವತಿಯಿಂದ ನಡೆಯಲಿರುವ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ವಿಜಯ ವೀರ ಸಂಘವು ಕಳೆದ 54 ವರ್ಷದಿಂದ ಉತ್ತಮ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ಈ ರೇಬಿಸ್ ಲಸಿಕೆ ಶಿಬಿರ ಕೂಡ ಒಂದು ಉತ್ತಮ ಸಮಾಜಮುಖಿ ಕಾರ್ಯಕ್ರಮವೆಂದು ತಿಳಿಸಿ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಡಾ. ರೆಡ್ಡಪ್ಪ ಅವರು ರೇಬಿಸ್ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿ ಲಸಿಕೆ ಹಾಕಿಸುವುದರಿಂದ ಈ ಕಾಯಿಲೆಯನ್ನು ತಡೆಯಬಹುದೆಂದು ತಿಳಿಸಿದರು.
ವಿಜಯ ವೀರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಚಿಟ್ಪಾಡಿ ಸುತ್ತ ಮುತ್ತಲಿನ ಪರಿಸರದ 100ಕ್ಕೂ ಮಿಕ್ಕಿ ನಾಯಿ ಹಾಗೂ ಬೆಕ್ಕುಗಳಿಗೆ ಮನೆ ಮನೆಗೆ ತೆರಳಿ ರೇಬಿಸ್ ಲಸಿಕೆ ಹಾಕಿಸಲಾಯಿತು.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now