
ಉದ್ಯಾವರ : ಇಂದಿನ ಸಂದರ್ಭದಲ್ಲಿ ಬಡತನ ರೇಖೆಯಲ್ಲಿರು ಅಥವಾ ಕೆಳಗಿರುವ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಸಲು ಬಡತನ ಎಂದೂ ಅಡ್ಡಿಯಾಗುವುದಿಲ್ಲ. ಸರಕಾರದ ಕಾರ್ಯಕ್ರಮವಾಗಲಿ , ದಾನಿಗಳ ಸಹಾಯ ಹಸ್ತವಾಗಲಿ ,ಸಂಘ ಸಂಸ್ಥೆಗಳ ನೆರವಾಗಲಿ ಹಿಂದಿಗಿಂತಲೂ ಇಂದು ಸಕಾಲದಲ್ಲಿ ದೊರೆಯುತ್ತದೆ. ಅದನ್ನು ಸದುಪಯೋಗ ಮಾಡಿಕೊಂಡು ಇಂದು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸ ಬಹುದು ಆ ನಿಟ್ಟಿನಲ್ಲಿ ಈ ಸಂಸ್ಥೆಯ ಈ ಕೆಲಸ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ಅದಕ್ಕೆ ಪೂರಕವಾಗಿದೆ.ಮತ್ತು ಸ್ತುತ್ಯಾರ್ಹವಾದುದು ಮತ್ತು ದಾಖಲಾಗ ಬೇಕಾದ್ದು . ಕಳೆದ ಇಪ್ಪತೆರಡಕ್ಕೂ ಹೆಚ್ಚು ವರ್ಷಗಳಿಂದ ಈ ಕೆಲಸ ಸಂಸ್ಥೆ ಮಾಡಿ ಕೊಂಡು ಬಂದಿರುತ್ತದೆ ಎಂದರೆ ಶಿಕ್ಷಣದ ಬಗ್ಗೆ ಸಂಸ್ಥೆಯ ಬದ್ಧತೆ ಅರಿವಾಗುತ್ತದೆ . ವಿದ್ಯಾರ್ಥಿಗಳು ಇದನ್ನು ಮನಗಂಡು ತಾವು ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ಕೆಲಸಕ್ಕೆ ಸೇರಿ ತಮ್ಮ ಕಾಲ ಮೇಲೆ ನಿಂತಾಗ ಇನ್ನೊಬ್ಬ ವಿದ್ಯಾರ್ಥಿಗೆ ಸಹಾಯ ಮಾಡುವುದರ ಮೂಲಕ ತಮ್ಮ ಋಣ ಸಂದಾಯ ಮಾಡ ಬಹುದು ಎಂದು ಉಡುಪಿ ಹೆಮ್ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕರಾದ ದಯಾನಂದ ಡಿ. ಕಿದಿಯೂರು ಅವರು , 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಶಾಲಾ ಸಭಾಂಗಣದಲ್ಲಿ ಜರಗಿದ ಪಿಯುಸಿ ವಿದ್ಯಾರ್ಥಿಗಳಿಗೆ ಯು.ಎಫ್.ಸಿ. ಪುಸ್ತಕ ಭಂಢಾರದಿಂದ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.
ಅವರು ಮುಂದುವರಿಯುತ್ತಾ ಮಕ್ಕಳು ಮೊಬೈಲ್ ನಿಂದ ಹೊರ ಬನ್ನಿ. ಓದಿನತ್ತ ಗಮನ ಕೊಡಿ. ಕೇವಲ ಮಾರ್ಕಿನ ಹಿಂದೆ ಬಿದ್ದು ಮಾನವೀಯತೆಯನ್ನು ಕಲಿಯುವುದನ್ನು ಮರೆಯ ಬೇಡಿ. ಶಿಕ್ಷಣದೊಂದಿಗೆ ಮಾನವೀಯತೆಯನ್ನು ಬೆಳೆಸಿ ಕೊಂಡಾಗ ಮಾತ್ರ ನಾವು ಕಲಿತ ಶಿಕ್ಷಣಕ್ಕೆ ಬೆಲೆ ಬರುವುದು. ಇಲ್ಲಿ ಪಡಕೊಂಡ ಪುಸ್ತಕ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಅದನ್ನು ಎಂದೂ ಮರೆಯಬೇಡಿ. ತಂದೆ ತಾಯಿ, ಗುರುಹಿರಿಯರಿಗೆ ಗೌರವ ಕೊಡುವುದು ಇಂದಿನ ವಿದ್ಯಾರ್ಥಿಗಳಲ್ಲಿ ಕಡಿಮೆ ಯಾಗುತ್ತಿದೆ. ಅದಕ್ಕೆ ನಾನಾ ಕಾರಣಗಳಿರ ಬಹುದು. ಆದರೆ ಮುಖ್ಯ ಕಾರಣ ನಾವು ಇಂದು ಮಕ್ಕಳಿಗೆ ಹಾಕುವ ಒತ್ತಡ . ಈ ಒತ್ತಡವನ್ನು ಕಡಿಮೆ ಮಾಡುವ ಜವಾಬ್ದಾರಿ ಹೆತ್ತವರದ್ದಾಗಿದೆ. ನಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸದೇ ಅವರನ್ನು ಅವರಷ್ಟಕ್ಕೆ ಬೆಳೆಯಲು ಬೆಳೆಯಲು ಬಿಡಿ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಮಾತಾನಾಡಿ, ಇಂದಿನ ವಿದ್ಯಾರ್ಥಿಗಳು ವಾಟ್ಸ್ ಆ್ಯಪಲ್ಲಿ ಬರುವ ಸುದ್ದಿಗಳನ್ನು ಸತ್ಯ ಎಂದು ಭ್ರಮಿಸಿ ವರ್ತಿಸುವುದನ್ನು ಮೊದಲು ನಿಲ್ಲಿಸ ಬೇಕಾಗಿದೆ. ನಮಗೆ ಜ್ಞಾನ ಹಂಚುವುದು ಶಿಕ್ಷಣ ಸಂಸ್ಥೆಗಳು ವಿನಹಾ ವಾಟ್ಸ್ ಅ್ಯಪ್ ಸಂಸ್ಥೆಗಳಲ್ಲ ಎಂಬುದನ್ನು ಅರಿತು ಕೊಳ್ಳ ಬೇಕು. ಈ ಬಗ್ಗೆ ಹೆತ್ತವರು ಜಾಗ್ರತೆ ವಹಿಸಿ ಮಕ್ಕಳಿಗೆ ತಿಳಿ ಹೇಳ ಬೇಕಾಗಿದೆ. ನಿರಂತರವಾಗಿ ಸಂಸ್ಥೆ ಮಕ್ಕಳ ಶಿಕ್ಷಣವನ್ನು ಕೇಂದ್ರಿಕರಿಸಿ ಕೊಂಡು ವಿವಿಧ ಕಾರ್ಯಕ್ರಮವನ್ನು ಹಮ್ಮಿ ಕೊಂಡು ಬರುತ್ತಾ ಇದೆ. ಪುಸ್ತಕ ಭಂಡಾರದಿಂದ ಪುಸ್ತಕ ವಿತರಣೆಯೂ ಒಂದು. ಕಳೆದ ಇಪ್ಪತ್ತೆರಡು ವರ್ಷದಿಂದ ಸಾವಿರಾರು ಮಕ್ಕಳು ಫಲಾನುಭವಿಗಳಾಗಿದ್ದಾರೆ. ಇದು ನಿರಂತರವಾಗಿ ಮುಂದುವರಿಯುವಂತಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಭಂಡಾರಿ, ಶರತ್ ಕುಮಾರ್ ಯು.ಪದ್ಮನಾಭ ಕಾಮತ್, ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ವಂದಿಸಿದರು .
ಸುಮಾರು 100 ವಿದ್ಯಾರ್ಥಿಗಳು ಪುಸ್ತಕ ಭಂಡಾರದಿಂದ ಪಠ್ಯ ಪುಸ್ತಕಗಳನ್ನು ಪಡಕೊಂಡರು.



ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now