
ಬ್ರಹ್ಮಾವರ, ಜೂನ್ 1: ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಬೆಳ್ಮಾರು ಸರ್ಕಾರಿ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮವನ್ನು ಸಮಾಜಸೇವಕ ಹಾಗೂ ಶಿಕ್ಷಣ ಪ್ರೇಮಿ ಡಾ. ಮನ್ಮಥ್ ಭಟ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಸೌಲಭ್ಯಗಳು ದೊರಕುವುದು ಅತ್ಯಂತ ಮುಖ್ಯವಾಗಿದ್ದು, ಸಮಾಜದ ಸಹಕಾರದಿಂದ ಶಿಕ್ಷಣ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಬೇಕೆಂದು ಕರೆ ನೀಡಿದರು.

ಡಾ. ಮನ್ಮಥ್ ಭಟ್ ಅವರು ಕಳೆದ ಮೂರು ವರ್ಷಗಳಿಂದ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದು, ಈ ಶೈಕ್ಷಣಿಕ ವರ್ಷದಲ್ಲಿಯೂ ತಮ್ಮ ಸೇವೆಯನ್ನು ಮುಂದುವರಿಸಿರುವುದು ವಿಶೇಷವಾಗಿದೆ.
ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಕೈಜೋಡಿಸುತ್ತಿರುವ ಹಲವು ದಾನಿಗಳು ಈ ಸಂದರ್ಭದಲ್ಲಿಯೂ ತಮ್ಮ ಸಹಾಯ ಹಸ್ತ ಚಾಚಿದರು. ರಜತ್ ಭಟ್ ಬೆಳ್ಮಾರು ಅವರು ಕಳೆದ 14 ವರ್ಷಗಳಿಂದ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಈ ವರ್ಷವೂ ಅವುಗಳನ್ನು ನೀಡಿದರು.
ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು ಕಳೆದ 13 ವರ್ಷಗಳಿಂದ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ನೀಡುತ್ತಿದ್ದು, ಈ ವರ್ಷವೂ ವಿದ್ಯಾರ್ಥಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಅಶೋಕ್ ರಾವ್ ಬೆಳ್ಮಾರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಳಿನಿ ಪ್ರದೀಪ್, ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿ, ಊರಿನ ಗಣ್ಯರು, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನಿರಂತರವಾಗಿ ಸಹಕರಿಸುತ್ತಿರುವ ದಾನಿಗಳು ಮತ್ತು ಸಮಾಜಸೇವಕರ ಸೇವೆಯನ್ನು ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕವಾಗಿ ಶ್ಲಾಘಿಸಿದರು. ಸಮಾಜದ ಸಹಕಾರ ಮತ್ತು ಶಿಕ್ಷಣದ ಮೇಲಿನ ಬದ್ಧತೆಯ ಉತ್ತಮ ಮಾದರಿಯಾಗಿ ಬೆಳ್ಮಾರು ಸರ್ಕಾರಿ ಶಾಲೆಯ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now