
ಕೋಲಾರ: ರಾಜ್ಯದ ಪತ್ರಕರ್ತರಿಗೆ ನಿವೇಶನ ದೊರಕಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಸರ್ಕಾರದ ನೀತಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು.
ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡು ಯಶಸ್ವಿಯಾಗಿ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಇಂದು ಏರ್ಪಡಿಸಿದ್ದ ಪ್ರಭಾಕರ್ ಅವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಉದ್ದೇಶಿತ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯ ಪ್ರವರ್ತಕ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ವಿ ಮುನಿರಾಜು ಅವರು ಕೇಳಿದ ಪ್ರಶ್ನೆಗೆ ಕೆ.ವಿ.ಪ್ರಭಾಕರ್ ಈ ಭರವಸೆ ನೀಡಿದರು.
ರಾಜ್ಯದಲ್ಲಿ ಬಹುತೇಕ ಗ್ರಾಮೀಣ ಪತ್ರಕರ್ತರು ಸ್ವಂತ ಸೂರು ಇಲ್ಲದೆ ಪರದಾಡುತ್ತಿದ್ದಾರೆ. ಅಂತಹ ಅವರ ನೆರವಿಗಾಗಿ ಪ್ರತಿ ತಾಲೂಕಿನಲ್ಲಿಯೂ ಪತ್ರಕರ್ತರಿಗೆ ನಿವೇಶನ ಕೊಡುವ ಯೋಜನೆ ರೂಪಿಸಬೇಕು ಎಂದು ಮುನಿರಾಜು ಮನವಿ ಮಾಡಿದರು.
ರಾಜ್ಯ ಸರ್ಕಾರ ಸಣ್ಣ ಪತ್ರಿಕೆಗಳಿಗೆ ನೀಡುತ್ತಿರುವ ಜಾಹೀರಾತುಗಳಲ್ಲಿ ಓಬಿಸಿ ಅಥವಾ ಗಡಿ ಎರಡರ ಪೈಕಿ ಒಂದು ಜಾಹೀರಾತು ಮಾತ್ರ ನೀಡಲಾಗುವುದು ಎಂಬ ನಿರ್ಧಾರ ಮಾಡಿರುವುದು ಸರಿಯಲ್ಲ. ಅದನ್ನು ಬದಲಾಯಿಸಿ ಎಂದು ಮುನಿರಾಜು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಕೆ ವಿ ಪ್ರಭಾಕರ್ ಓಬಿಸಿ ಮತ್ತು ಗಡಿ ಎರಡೂ ಜಾಹಿರಾತುಗಳನ್ನು ಸಣ್ಣ ಪತ್ರಿಕೆಗಳಿಗೆ ನೀಡುವ ಕುರಿತು ಜಾಹಿರಾತು ನೀತಿಯಲ್ಲಿ ಜೂನ್ ಒಂದರಿಂದ ಬದಲಾವಣೆ ಮಾಡಲಾಗುವುದು ಎಂದು ಎಂದು ಪ್ರಭಾಕರ್ ಭರವಸೆ ನೀಡಿದರು.
ನಾಡ ಹಬ್ಬಗಳು ಮತ್ತು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಸಣ್ಣ ಪತ್ರಿಕೆಗಳಿಗೆ ಕೇವಲ ಅರ್ಧ ಪುಟ ಜಾಹೀರಾತು ನೀಡಿರುವ ಬಗ್ಗೆ ಮುನಿರಾಜು ಗಮನ ಸೆಳೆದಾಗ ಇನ್ನು ಮುಂದೆ ರಾಜ್ಯ ಮಟ್ಟದ ಪತ್ರಿಕೆಗಳ ರೀತಿಯಲ್ಲೇ ಸಣ್ಣ ಪತ್ರಿಕೆಗಳಿಗೂ ಒಂದು ಪುಟದ ಜಾಹೀರಾತು ನೀಡುವಂತೆ ವಾರ್ತಾ ಇಲಾಖೆಗೆ ಸೂಚಿಸುವುದಾಗಿ ಪ್ರಭಾಕರ್ ಅವರು ಭರವಸೆ ನೀಡಿದರು.
ರಾಜ್ಯದ ಪತ್ರಕರ್ತರ ಬಸ್ ಪಾಸ್ ಸೌಲಭ್ಯ ಮತ್ತು ಆರೋಗ್ಯ ವಿಮೆ ಸೌಲಭ್ಯದಲ್ಲಿ ಒದಗಿಸುವ ವಿಚಾರದಲ್ಲಿ ಇರುವ ಕೆಲವು ನಿಯಮಗಳನ್ನು ಸಡಿಲಗೊಳಿಸಿ ಪತ್ರಕರ್ತರಿಗೆ ಅನುಕೂಲವಾಗುವಂತೆ ಒಂದು ವಾರದಲ್ಲಿ ಹೊಸ ಆದೇಶ ಹೊರಬೀಳಲಿದೆ ಎಂದು ಕೆ.ವಿ. ಪ್ರಭಾಕರ್ ತಿಳಿಸಿದರು.
ಕೋಲಾರದಲ್ಲಿ ಸೈಕಲ್ ನಲ್ಲಿ ಪತ್ರಿಕೆ ಹಾಕುತ್ತಿದ್ದ ನಾನು ಇಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಸ್ಥಾನಕ್ಕೆ ಏರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ. ಅದರೊಂದಿಗೆ ನನ್ನನ್ನು ಬೆಂಗಳೂರಿಗೆ ಬರುವಂತೆ ಮಾಡಿ ಅವಕಾಶ ದೊರಕಿಸಿಕೊಟ್ಟ ಕೋಲಾರದ ಹಿರಿಯ ಪತ್ರಕರ್ತರಾದ ವಾಸುದೇವ ಹೊಳ್ಳ, ಬಿ.ವಿ. ಗೋಪಿನಾಥ್ ಮತ್ತು ದಿವಂಗತ ಮಲ್ಲೇಶ್ ಅವರು ಸಹ ಕಾರಣ ಎಂದು ಕೆ.ವಿ.ಪ್ರಭಾಕರ್ ಅವರು ನೆನಪಿಸಿಕೊಂಡರು.
ನಮ್ಮ ತಂದೆ ತಾಯಿಗಳಿಗೆ ನಾನು ಬೆಂಗಳೂರಿಗೆ ಹೋಗುವುದು ಇಷ್ಟವಿರಲಿಲ್ಲ. ಕೋಲಾರದಲ್ಲಿಯೇ ಉಳಿಯುವಂತೆ ಒತ್ತಾಯಿಸಿದ್ದರು. ಆದರೆ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಅವಕಾಶ ದೊರಕಿದ ಸಂದರ್ಭದಲ್ಲಿ ನನಗೆ ಮಾರ್ಗದರ್ಶಿಗಳು ಆಗಿದ್ದ ಈ ಮೂವರು ಪತ್ರಕರ್ತರು ನಮ್ಮ ಪೋಷಕರ ಮನವೊಲಿಸಿ ಬೆಂಗಳೂರು ತಲುಪುವಂತೆ ಮಾಡಿದರು. ಅದರಿಂದಾಗಿ ಇಂದು ಈ ಸ್ಥಾನಕ್ಕೆ ಬರುವಂತಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಎಂ. ವಾಸುದೇವಹೊಳ್ಳ, ರಾಜ್ಯ ಉಪಾಧ್ಯಕ್ಷ ಕೆರಗೋಡು ಸೋಮಶೇಖರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯಿಷಾ ಖಾನಂ ಅವರು ಉಪಾಧ್ಯಕ್ಷರಿದ್ದರು.
ಕಳೆದ ಮೂರು ವರ್ಷಗಳಲ್ಲಿ ಯಾವುದೇ ಸಂದರ್ಭದಲ್ಲಿಯೂ ಸಹ ಅಧಿಕಾರದ ಅಹಂಭಾವ ತೋರಿಸದೆ ತಮ್ಮ ಸರಳ ಶೈಲಿಯಲ್ಲಿಯೇ ರಾಜ್ಯದ ಮೂಲೆ ಮೂಲೆಯ ಪತ್ರಕರ್ತರ ಹಿತಾಸಕ್ತಿಯನ್ನು ಕಾಪಾಡಲು ಪ್ರತಿ ಕ್ಷಣವು ದುಡಿಯುತ್ತಿರುವ ಕೆ ವಿ ಪ್ರಭಾಕರ್ ಅವರನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಕರ್ತರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಪತ್ರಕರ್ತರ ಪ್ರಶ್ನೆಗಳಿಗೆ ಕೆ.ವಿ. ಪ್ರಭಾಕರ್ ಅವರು ಸಮರ್ಪಕ ಉತ್ತರಗಳನ್ನು ನೀಡಿದರು ಮತ್ತು ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರದ ಭರವಸೆ ನೀಡಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now