
ಮುಂಬಯಿ, ಫೆ.10: ಒಂದು ದೇಶದ ಸಂಸ್ಕೃತಿಯ ದಾರ್ಢ್ಯವನ್ನು ಅರಿಯಬೇಕಾದರೆ ಅಲ್ಲಿಯ ಅಭಿಜಾತ ಸಾಹಿತ್ಯ ಎಷ್ಟರ ಮಟ್ಟಿಗೆ ನೆಲೆಯೂರಿದೆ ಎಂದು ನೋಡಬೇಕಾಗುತ್ತದೆ. ಅಭಿಜಾತ ಸಾಹಿತ್ಯವನ್ನು ಆಧುನಿಕ ದೇಶಗಳು ಕೂಡ ಕಾಪಾಡಿಕೊಂಡು ಬಂದಿವೆ. ಅದು ಜನಜೀವನದಲ್ಲಿ ಒಂದು ಮಟ್ಟದಲ್ಲಿ ಹಾಸುಹೊಕ್ಕಾಗಿದೆ. ಅಭಿಜಾತ ಕೃತಿಯ ಲಕ್ಷಣ ಏನೆಂದರೆ ಅದು ಹೇಳಬೇಕಾದುದನ್ನು ಎಂದೂ ಹೇಳಿ ಮುಗಿಸಿರುವುದಿಲ್ಲ. ಅನುಭವದಲ್ಲಿ ಹೊಸತನ್ನು ತಂದುಕೊಡುವುದು ಅಭಿಜಾತ ಸಾಹಿತ್ಯದ ಮುಖ್ಯ ಲಕ್ಷಣ ಎಂದು ಬಹುಶ್ರುತ ವಿದ್ವಾಂಸರೂ, ೨೦೨೬ರ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶತಾವಧಾನಿ ಡಾ| ಆರ್.ಗಣೇಶ್ ನುಡಿದರು.
ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನವು ಸ್ಥಾಪಿತವಾಗಿ 125 ವರ್ಷಗಳು ಸಂದಿರುವ ಸಂಭ್ರಮದಲ್ಲಿ ಕನ್ನಡ ವಿಭಾಗವು ಕಳೆದ ಶುಕ್ರವಾರ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದ್ದ ‘ಅಭಿಜಾತ ಸಾಹಿತ್ಯದ ಆವಶ್ಯಕತೆ’ ವಿಚಾರಿತ ಉಪನ್ಯಾಸವನ್ನುದ್ದೇಶಿಸಿ ಶತಾವಧಾನಿ ಮಾತನಾಡಿದರು.

ಡಾ| ಉಮಾ ರಾಮರಾವ್ ಅವರ ಪಿಹೆಚ್‌ಡಿ ಮಹಾಪ್ರಬಂಧ ‘ಬಹು ನೆಲೆಗಳ ಬೆರಗು’ ಕೃತಿಯನ್ನು ಬಿಡುಗಡೆಗೊಳಿಸಿದ ಡಾ| ಗಣೇಶ್,‘ಒಂದು ಕೃತಿಗೆ ಕಾಲಪ್ರತಿಷ್ಠೆ ಬೇಕು; ಅದು ಬಂದರೆ ಆ ಕೃತಿಗೆ ಆದರ ಬರುವುದು. ಅಭಿಜಾತ ಸಾಹಿತ್ಯ ಅನಾಥ ಪ್ರಜ್ಞೆಯನ್ನು ದೂರಗೊಳಿಸುತ್ತದೆ. ಅದು ನಿತ್ಯ ಸಾಹಚರ್ಯದಲ್ಲಿ ಇರುವಂಥದ್ದು. ಮಾನವ ಸ್ವಭಾವ ಕಾಲಾತೀತವಾಗಿ ಹೇಗೆ ಇರುತ್ತದೆ ಎನ್ನುವುದನ್ನು ಅಭಿಜಾತ ಸಾಹಿತ್ಯ ತಿಳಿಸುತ್ತದೆ. ಮಾನವರಲ್ಲಿ ಅನಿರೀಕ್ಷಿತವಾದದ್ದು ಇಲ್ಲ; ಎಲ್ಲವೂ ನಿರೀಕ್ಷಿತವೇ ಎನ್ನುವುದನ್ನು ಅಭಿಜಾತ ಸಾಹಿತ್ಯ ಹೇಳಿಕೊಡುತ್ತದೆ. ಅಭಿಜಾತ ಕೃತಿಗಳ ಮಗ್ನತೆ ಎಂದಿಗೂ ನಮ್ಮನ್ನು ಉಳಿಸುತ್ತದೆ. ಆ ಸಾಹಿತ್ಯವು ಸ್ವಲ್ಪವೂ ಕೊರತೆ ಇಲ್ಲದಂತೆ, ಖರ್ಚಿಲ್ಲದ ಆನಂದವನ್ನು ಕೊಡುವಂಥದ್ದು. ಅದೊಂದು ಕಣ್ಣಿಗೆ ಕಾಣದ ದೀಪ. ಅಭಿಜಾತ ಕೃತಿಗಳ ಮಹತ್ವವನ್ನು, ಅವುಗಳ ವಸ್ತು ವಿಷಯ ಪಾತ್ರ ಕತೆಗಳ ಮೂಲಕ ವಿಶ್ಲೇಷಿಸುವುದು ಮುಖ್ಯವಾಗುತ್ತದೆ ಎಂದರು.
ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಪ್ರೊ| ಡಾ| ಜಿ.ಎನ್ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ ‘ಮುಂಬಯಿ ವಿಶ್ವವಿದ್ಯಾಲಯವು ೧೨೫ ವರ್ಷಗಳಲ್ಲಿ ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಗೆ ಮಹತ್ವದ ದೇಣಿಗೆಯನ್ನು ಕೊಟ್ಟಿದೆ. ಇಲ್ಲಿಯ ಐವತ್ತಾರಕ್ಕಿಂತಲೂ ಹೆಚ್ಚು ಶೈಕ್ಷಣಿಕ ವಿಭಾಗಗಳಿಗೆ ಸರಿದೊರೆಯಾಗಿ ಕನ್ನಡ ವಿಭಾಗವು ಕೆಲಸ ಮಾಡುತ್ತಿದೆ. ಶ್ಯಾಮರಾವ್ ವಿಠ್ಠಲ ಕೈಕಿಣಿ, ರಾ.ಹ.ದೇಶಪಾಂಡೆ ಇವರಿಬ್ಬರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಹಳ ಪ್ರಯಾಸಪಟ್ಟು ಕನ್ನಡವನ್ನು ಸ್ಥಾಪಿಸಿ ಮುಂಬೈ ಪ್ರಾಂತ್ಯದಲ್ಲಿ ಕನ್ನಡ ಬೆಳಗುವಂತೆ ನೋಡಿಕೊಂಡರು. ಆ ಬಳಿಕ ಅನೇಕ ಸಂಘ ಸಂಸ್ಥೆಗಳು ಕನ್ನಡದ ಕೈಂಕರ್ಯವನ್ನು ಮಾಡಿದವು. ಕನ್ನಡದಲ್ಲಿ ಇರುವ ಏಕೈಕ ಶತಾವಧಾನಿಗಳಾದ ಡಾ| ಆರ್.ಗಣೇಶ್ ಅವರು ಎಂಟು ಭಾಷೆಗಳಲ್ಲಿ ಅಷ್ಟಾವಧಾನ ಮಾಡಿ ಬೆರಗು ಮೂಡಿಸಿದವರು. ಅವರು ವಿದ್ವನ್‌ಲೋಕದ ವಿಸ್ಮಯ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೂ ಆಶಯ ನುಡಿಗಳನ್ನಾಡಿ, ಉಮಾ ರಾಮರಾವ್ ಅವರೊಬ್ಬ ಸಾಧಕರು. ಅವರ ಪಿಎಚ್.ಡಿ. ಮಹಾಪ್ರಬಂಧವು ಭೈರಪ್ಪನವರಾದಿಯಾಗಿ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಹಾಗೂ ಡಾ| ಗಣೇಶ್ ಅವರನ್ನು ಶಾಲು ಹೊದಿಸಿ ಕೃತಿ ಗೌರವ ನೀಡಿ ಅಭಿವಂದಿಸಿದರು.

ಡಾ| ಉಮಾ ರಾಮರಾವ್ ಅವರು ಡಾ| ಗಣೇಶ್ ಅವರನ್ನು ಪರಿಚಯಿಸಿ ಮೇರು ಸಾಹಿತಿ ಡಾ| ಎಸ್.ಎಲ್ ಭೈರಪ್ಪ ಅವರ ಸರಳ ಸ್ವಭಾವವನ್ನು ವಿವರಿಸುತ್ತಾ ಅವರ ಕಾದಂಬರಿಗಳಲ್ಲಿನ ಮೆಚ್ಚುವ ಮತ್ತು ಮೆಚ್ಚದ ಅಂಶಗಳನ್ನೆಲ್ಲ ಯಾವ ಹಿಂಜರಿಕೆಯೂ ಇಲ್ಲದೆಯೇ ಹೇಳುವ ಸ್ವಾತಂತ್ರ್ಯವನ್ನು ತಮಗೆ ಕೊಟ್ಟಿದ್ದರೆಂದು ಹೇಳಿದರು. ತಮ್ಮ ಅಧ್ಯಯನದ ಸಂದರ್ಭದಲ್ಲಿ ಮಾರ್ಗದರ್ಶಕರಾದ ಡಾ| ಉಪಾಧ್ಯರ ಜೊತೆಯಲ್ಲಿ ತಮ್ಮನ್ನು ಮುನ್ನಡೆಸಿದ ಡಾ| ಆರ್. ಗಣೇಶ್, ಪ್ರೊ| ಎಲ್.ವಿ ಶಾಂತಕುಮಾರಿ ಮತ್ತು ಲಕ್ಷಿ ಶ ತೋಳ್ಪಾಡಿ ಅವರನ್ನು ಉಮಾ ಕೃತಜ್ಞತೆಯಿಂದ ನೆನೆದರು.
ನಡೆಸಲಾದ ಉಪನ್ಯಾಸಕರೊಂದಿಗೆ ಸಂವಾದದಲ್ಲಿ ಕಲಾ ಭಾಗ್ವತ್, ವಿಕ್ರಮ್ ಜೋಶಿ, ಡಾ| ಜಿ.ಎನ್ ಉಪಾಧ್ಯ, ನಾರಾಯಣ ನವಿಲೇಕರ್, ಅಮಿತಾ ಭಾಗ್ವತ್, ಉಮಾ ರಾಮರಾವ್ ಮತ್ತಿತರರು ಪಾಲ್ಗೊಂಡರು. ವಿಭಾಗದ ವಿದ್ಯಾಥಿಗಳು, ನಗರದ ಕನ್ನಡ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದು, ಸಂಶೋಧನ ವಿದ್ಯಾಥಿ ಕಲಾ ಭಾಗ್ವತ್ ಸ್ವಾಗತಗೀತೆಯನ್ನಾಡಿದರು. ವಿದ್ಯಾ ರಾಮಕೃಷ್ಣ ಕೃತಿಯನ್ನು ಪರಿಚಯಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಪಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now