
ಉಡುಪಿ: ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ “ಅಟಿಡೊಂಜಿ ದಿನ” ಕಾರ್ಯಕ್ರಮವು ದಿನಾಂಕ 09-08-2026ರ ಭಾನುವಾರ ಸಂಜೆ 5 ಗಂಟೆಗೆ, ಘಟಕದ ಸಭಾಂಗಣದಲ್ಲಿ ಘಟಕದ ಅಧ್ಯಕ್ಷರಾದ ವಿನೋದ್ ಮಂಚಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮಕ್ಕಾಗಿ ಯುವ ವಾಹಿನಿಯ ಸದಸ್ಯರು 35ಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ತಿನಿಸುಗಳನ್ನು ತಮ್ಮ ಮನೆಗಳಿಂದ ಸಿದ್ಧಪಡಿಸಿ ತಂದಿದ್ದರು. ಘಟಕದ ಮಾಜಿ ಅಧ್ಯಕ್ಷರುಗಳು ಒಗ್ಗೂಡಿ ಗುರುವಿಗೆ ದೀಪ ಬೆಳಗಿಸುವ ಮೂಲಕ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಚೆನ್ನಮನೆಯ ಆಟದೊಂದಿಗೆ ವಾಲೆಬೆಲ್ಲ ಹಂಚುವ ಮೂಲಕ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು.

ಘಟಕದ ಮಾಜಿ ಅಧ್ಯಕ್ಷರು ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಯುವ ವಾಹಿನಿಯು ಈವರೆಗೆ ನಡೆಸಿಕೊಂಡು ಬಂದಿರುವ ವಿವಿಧ ಕಾರ್ಯಕ್ರಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅದೇ ರೀತಿ ಮಾಜಿ ಅಧ್ಯಕ್ಷರಾದ ಭಾಸ್ಕರ್ ಸುವರ್ಣ ಅವರು ಆಟಿಯ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಮನೋರಂಜನಾ ಭಾಗದಲ್ಲಿ ಮಾಜಿ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್, ಚಿದಾನಂದ ಕೋಟ್ಯಾನ್ ಹಾಗೂ ಯುವ ವಾಹಿನಿಯ ಸದಸ್ಯರು ಸಂಗೀತ ಕಾರ್ಯಕ್ರಮದ ಮೂಲಕ ಎಲ್ಲರನ್ನೂ ರಂಜಿಸಿದರು.
ಆಗಮಿಸಿದ ಸದಸ್ಯರಿಗಾಗಿ ವಿವಿಧ ಮನೋರಂಜನಾ ಸ್ಪರ್ಧೆಗಳು ಹಾಗೂ ರಸಪ್ರಶ್ನೆ ಕಾರ್ಯಕ್ರಮವನ್ನು ಮಹೇಶ್ ಮಲ್ಪೆ ಅವರು ನಡೆಸಿಕೊಟ್ಟರು. ಸದಸ್ಯರೆಲ್ಲರೂ ಉತ್ಸಾಹದಿಂದ ಭಾಗವಹಿಸಿ, ಹಾಡಿ-ಕುಣಿದು ಸಂಭ್ರಮಿಸಿದ ಪರಿಣಾಮ ಕಾರ್ಯಕ್ರಮವು ಹಬ್ಬದ ವಾತಾವರಣವನ್ನು ಮೂಡಿಸಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಧ್ಯಕ್ಷರಾದ ವಿನೋದ್ ಮಂಚಿ ಅವರು ಕೃತಜ್ಞತೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು. ಸುಮಾರು 70 ಕ್ಕೂ ಹೆಚ್ಚು ಮಂದಿ ಭೋಜನವನ್ನು ಸ್ವೀಕರಿಸಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು, ಸರ್ವ
ಸದಸ್ಯರು ಹಾಗೂ ನೂತನವಾಗಿ ಸೇರ್ಪಡೆಗೊಂಡ ಸದಸ್ಯರು ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಭೋಜನದೊಂದಿಗೆ “ಆಟಿ ಡು ಒಂಜಿ ದಿನ” ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now