ಸೋಮೇಶ್ವರ ಬೀಚ್‌ನಲ್ಲಿ ದುರಂತ: ಸಮುದ್ರಪಾಲಾಗಿದ್ದ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆ

ಸೋಮೇಶ್ವರ ಬೀಚ್‌ನಲ್ಲಿ ದುರಂತ: ಸಮುದ್ರಪಾಲಾಗಿದ್ದ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆ
0Shares

ಉಳ್ಳಾಲ, ಅ. 11: ಸೋಮೇಶ್ವರದ ಪೆರಿಬೈಲ್ ಬೀಚ್‌ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಶೋಭಿತ್ ಎಂ. ಗೌಡ (18) ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ. ಭಾಷೆಗಳನ್ನುಕಲಿಯಿರಿ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿಯಾಗಿದ್ದ ಶೋಭಿತ್, ಶನಿವಾರ ಸಂಜೆ ಸ್ನೇಹಿತರೊಂದಿಗೆ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರಪಾಲಾಗಿದ್ದರು.
ಉಜಿರೆ ಎಸ್‌ಡಿಎಂ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸೋಮೇಶ್ವರದ ಪೆರಿಬೈಲ್ ಬೀಚ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರಕ್ಕಿಳಿದು ನೀರಾಟವಾಡುತ್ತಿದ್ದಾಗ ಏಕಾಏಕಿ ಅಪ್ಪಳಿಸಿದ ಅಲೆಗಳ ರಭಸಕ್ಕೆ ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಈಜು ತಿಳಿದಿದ್ದ ಆಕಾಶ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಶೋಭಿತ್ ಸಮುದ್ರದಲ್ಲಿ ನಾಪತ್ತೆಯಾಗಿದ್ದರು.

ವಿದ್ಯಾರ್ಥಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿಯವರೆಗೂ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಎಸ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆದರೂ ರಾತ್ರಿ ವೇಳೆ ಶೋಭಿತ್ ಪತ್ತೆಯಾಗಿರಲಿಲ್ಲ.
ಭಾನುವಾರವೂ ಶೋಧ ಕಾರ್ಯ ಮುಂದುವರಿದಿದ್ದು, ಮಧ್ಯಾಹ್ನದ ವೇಳೆಗೆ ಉಳ್ಳಾಲ ವಲಯ ನಾಡದೋಣಿ ಹಾಗೂ ಗಿಲೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಂ.ಬಿ., ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ ಹಾಗೂ ಇರ್ಫಾನ್ ಕೋಟೆಪುರ ಅವರು ನಾಡದೋಣಿಯಲ್ಲಿ ಸಮುದ್ರದಲ್ಲಿ ಹುಡುಕಾಟ ನಡೆಸಿದರು. ಈ ವೇಳೆ ಉಚ್ಚಿಲ ಪೆರಿಬೈಲ್ ಸಮೀಪ ಸಮುದ್ರದಲ್ಲಿ ತೇಲುತ್ತಿದ್ದ ಶೋಭಿತ್ ಅವರ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ನಾಡದೋಣಿಯ ಮೂಲಕ ಕೋಟೆಪುರ ಸಮುದ್ರ ತೀರಕ್ಕೆ ತರಲಾಗಿದ್ದು, ಬಳಿಕ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತ ಶೋಭಿತ್ ಕುಟುಂಬದ ಏಕೈಕ ಪುತ್ರನಾಗಿದ್ದು, ಅವರ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಪರಿಚಿತ ವಲಯದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now