ಉಡುಪಿ ತ್ರಿವೇಣಿ ಸರ್ಕಲ್ ಬಳಿ ಇರುವ ಹೋಟೆಲ್‌ನಲ್ಲಿ ನಡೆದ ಕೊಲೆ ಸಂಚಿನ ಹಿಂದಿರುವ ಸಂಪೂರ್ಣ ಜಾಲ ಬಯಲಿಗೆಳೆಯಬೇಕು: SDPI

ಉಡುಪಿ ತ್ರಿವೇಣಿ ಸರ್ಕಲ್ ಬಳಿ ಇರುವ ಹೋಟೆಲ್‌ನಲ್ಲಿ ನಡೆದ ಕೊಲೆ ಸಂಚಿನ ಹಿಂದಿರುವ ಸಂಪೂರ್ಣ ಜಾಲ ಬಯಲಿಗೆಳೆಯಬೇಕು: SDPI
0Shares

ಉಡುಪಿ: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ, ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ವ್ಯಕ್ತಿಯೇ ಈ ಕುರಿತು ಪೊಲೀಸರಿಗೆ ದೂರು ನೀಡಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವ ಅಗತ್ಯವನ್ನು ಉಂಟುಮಾಡಿದೆ.

ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಪ್ರಕಾರ, ಉಡುಪಿ ಮೂಲದ ಸುದೀಪ್ ಎಂಬಾತನು ದೂರುದಾರರನ್ನು ಉಡುಪಿಯ ತ್ರಿವೇಣಿ ಸರ್ಕಲ್ ಬಳಿಯ ಹೋಟೆಲ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಮಹೇಶ್ ಎಂಬಾತನನ್ನು ಪರಿಚಯಿಸಿದ್ದಾನೆ ಎನ್ನಲಾಗಿದೆ. ಬಳಿಕ ಅಲ್ಲಿ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡುವ ಕುರಿತು ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೇವಲ ಸುದೀಪ್, ಮಹೇಶ್ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ತನಿಖೆ ಸೀಮಿತಗೊಳಿಸದೆ, ಸಂಚಿನ ಹಿಂದೆ ಇರುವ ಸಂಪೂರ್ಣ ಜಾಲ, ಪ್ರೇರಕರು, ಹಣಕಾಸು ನೆರವು ನೀಡಿದವರು, ಸಂಪರ್ಕ ಹೊಂದಿರುವವರು ಹಾಗೂ ಇತರ ಸಹಭಾಗಿಗಳ ಪಾತ್ರವನ್ನು ತನಿಖೆಯ ಮೂಲಕ ಬಯಲಿಗೆಳೆಯಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

ದೂರುದಾರನೇ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಹಿನ್ನೆಲೆಯಲ್ಲಿ, ತ್ರಿವೇಣಿ ಜಂಕ್ಷನ್ ಬಳಿಯ ಹೋಟೆಲ್‌ನಲ್ಲಿ ನಡೆದ ಸಭೆ, ಸಭೆಯಲ್ಲಿ ಭಾಗವಹಿಸಿದ್ದವರ ಸಂಪರ್ಕಗಳು, ದೂರವಾಣಿ ಕರೆಗಳು, ವಾಟ್ಸಪ್ ಸಂದೇಶಗಳು, ಹಣಕಾಸಿನ ವ್ಯವಹಾರಗಳು ಹಾಗೂ ಗುರಿಯಾಗಿಸಲಾಗಿದ್ದ ವ್ಯಕ್ತಿಯ ಚಲನವಲನಗಳ ಕುರಿತು ಸಂಗ್ರಹಿಸಲಾಗಿದ್ದ ಮಾಹಿತಿಯನ್ನು ಪೊಲೀಸರಿಗೆ ಒದಗಿಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿ, ತಪ್ಪಿತಸ್ಥರನ್ನು ತಡಮಾಡದೆ ಕಾನೂನು ಕ್ರಮಕ್ಕೆ ಒಳಪಡಿಸಬೇಕು.

ಈ ಪ್ರಕರಣದಲ್ಲಿ ಸುಮಾರು ₹24 ಲಕ್ಷದಷ್ಟು ದೊಡ್ಡ ಮೊತ್ತವನ್ನು ಕೊಲೆ ನಡೆಸಲು ಮುಂದಾದವರಿಗೆ ನೀಡಲು ಸಿದ್ಧಪಡಿಸಲಾಗಿತ್ತು ಎಂಬ ಆರೋಪವೂ ಗಂಭೀರವಾಗಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರದ ಹಿಂದೆ ಪ್ರಭಾವಿ ವ್ಯಕ್ತಿಗಳು ಅಥವಾ ಸಂಘಟಿತ ಜಾಲದ ಕೈವಾಡವಿದೆಯೇ ಎಂಬುದನ್ನು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಸಂಚೇ ಅಥವಾ ಇದರ ಹಿಂದೆ ಯಾವುದಾದರೂ ಸಂಘಟನೆ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನೂ ತನಿಖೆಯಿಂದ ಸ್ಪಷ್ಟಪಡಿಸಬೇಕು. ಹಣಕಾಸು ನೆರವು ನೀಡಿದವರು, ಸಂಚಿಗೆ ಪ್ರೇರಣೆ ನೀಡಿದವರು ಹಾಗೂ ಕೊಲೆ ಸಂಚಿನ ಕಾರ್ಯಗತಗೊಳಿಸುವಿಕೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿರುವವರು ಯಾರೇ ಆಗಿದ್ದರೂ, ಅವರ ಪ್ರಭಾವ, ಸ್ಥಾನಮಾನ ಅಥವಾ ರಾಜಕೀಯ ಹಿನ್ನೆಲೆಯನ್ನು ಪರಿಗಣಿಸದೆ ಕಾನೂನು ಕ್ರಮ ಕೈಗೊಳ್ಳಬೇಕು.

ಇಂತಹ ಘಟನೆಗಳು ಸಮಾಜದಲ್ಲಿ ಭಯ ಮತ್ತು ಗೊಂದಲಕ್ಕೆ ಕಾರಣವಾಗುವುದಲ್ಲದೆ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ನಡೆಸಿ, ಸಂಚಿನ ನೈಜ ಹಿನ್ನೆಲೆ ಹಾಗೂ ಇದರ ಹಿಂದಿರುವ ಸಂಪೂರ್ಣ ಜಾಲವನ್ನು ಬಯಲಿಗೆಳೆಯಬೇಕು ಎಂದು SDPI ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now