ತುಳು ಭಾಷೆಗೆ ಆಡಳಿತ ಭಾಷೆಯ ಮಾನ್ಯತೆ : ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಉಡುಪಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ

ತುಳು ಭಾಷೆಗೆ ಆಡಳಿತ ಭಾಷೆಯ ಮಾನ್ಯತೆ : ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಉಡುಪಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ
0Shares

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವ ಸರ್ಕಾರದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ತುಳುಕೂಟ ಮತ್ತು ಸಮಸ್ತ ತುಳುವರ ಪರವಾಗಿ ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮೂಲಕ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ತುಳುವರ ಪರವಾಗಿ ಕಾಳಜಿ ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್‌. ತಂಗಡಗಿ, ಸರ್ಕಾರದ ಮುಂದೆ ಈ ವಿಚಾರವನ್ನು ನಿರಂತರವಾಗಿ ಮಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಪುತ್ತೂರಿನ ಶಾಸಕರಾದ ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಶಾಸಕರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಗೂ ಆಗ್ರಹಗಳನ್ನು ವ್ಯಕ್ತಪಡಿಸಿದ ಅಖಿಲ ಭಾರತ ತುಳುಒಕ್ಕೂಟದ ಅಧ್ಯಕ್ಷರಾದ ಎ. ಸಿ. ಭಂಡಾರಿ ಹಾಗೂ ದೇಶ-ವಿದೇಶಗಳ ಎಲ್ಲಾ ತುಳು ಸಂಘ-ಸಂಸ್ಥೆಗಳಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

“ಸಮಸ್ತ ತುಳುವರಿಗೆ ಇದೊಂದು ಚಾರಿತ್ರಿಕ ದಿನ. ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಗರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮಹತ್ವದ ದಿನವಾಗಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದು ಐತಿಹಾಸಿಕ ಹೆಜ್ಜೆಯಾಗಿದೆ. ಸುಮಾರು 3 ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ತುಳು ಭಾಷೆಗೆ ದೊರೆತಿರುವ ಮಹತ್ವದ ಕೊಡುಗೆಯಾಗಿದೆ” ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಡಾ. ಎಂ. ಮೋಹನ್ ಆಳ್ವ ಅವರು ಸಲ್ಲಿಸಿದ್ದ ವರದಿ ಹಾಗೂ ಬಳಿಕ ಸಿದ್ದರಾಮಯ್ಯ ಅವರ ಸರ್ಕಾರ ರಚಿಸಿದ ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ದಿಟ್ಟ ನಿರ್ಧಾರ ಕೈಗೊಂಡು ತುಳು ಭಾಷೆಗೆ ರಾಜ್ಯದ ಅಧಿಕೃತ ಆಡಳಿತ ಭಾಷೆಯ ಮಾನ್ಯತೆ ನೀಡಿರುವುದು ಸಮಸ್ತ ತುಳುವರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now