ಸ್ವಯಂ ನಿವೃತ್ತಿ, ವರ್ಗಾವಣೆಗೊಂಡ ಸಿಬ್ಬಂದಿಗೆ ಭಾವನಾತ್ಮಕ ಬೀಳ್ಕೊಡುಗೆ

ಸ್ವಯಂ ನಿವೃತ್ತಿ, ವರ್ಗಾವಣೆಗೊಂಡ ಸಿಬ್ಬಂದಿಗೆ ಭಾವನಾತ್ಮಕ ಬೀಳ್ಕೊಡುಗೆ
0Shares

ತೀರ್ಥಹಳ್ಳಿ, ಆ.14: ಸರ್ಕಾರಿ ಸೇವೆ ಎಂಬುದು ಕೇವಲ ಉದ್ಯೋಗವಲ್ಲ, ಸಮಾಜದ ಋಣ ತೀರಿಸುವ ಅವಕಾಶವಾಗಿದ್ದು, ವ್ಯಕ್ತಿಯ ಅನುಪಸ್ಥಿತಿ ಕೆಲವರಲ್ಲಾದರೂ ಬೇಸರ ಮೂಡಿಸುವಂತಿರಬೇಕು. ಅಂತಹ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಿತ್ವದಿಂದಲೇ ಗಳಿಸಬಹುದು ಎಂದು ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಟಿ.ವಿ. ಸತೀಶ್ ಅಭಿಪ್ರಾಯಪಟ್ಟರು.

ಮೇಗರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಯಂ ನಿವೃತ್ತಿ ಪಡೆದ ಶುಶ್ರೂಷಣಾಧಿಕಾರಿ ನಿರ್ಮಲ ಹಾಗೂ ವರ್ಗಾವಣೆಗೊಂಡ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನಾಗರತ್ನ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಯಂ ನಿವೃತ್ತಿ ಪಡೆಯುವುದು ಸುಲಭದ ನಿರ್ಧಾರವಲ್ಲ. ಉತ್ತಮ ಸೇವೆ ಸಲ್ಲಿಸಿ ಸಹೋದ್ಯೋಗಿಗಳ ಮನಸ್ಸು ಗೆದ್ದವರಿಗೆ ಮಾತ್ರ ಇಂತಹ ಆತ್ಮೀಯ ಬೀಳ್ಕೊಡುಗೆ ಸಿಗುತ್ತದೆ ಎಂದು ಅವರು ಹೇಳಿದರು. ಇಬ್ಬರೂ ತಮ್ಮ ಸೇವಾ ಅವಧಿಯಲ್ಲಿ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದು, ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷೆ ಗೀತಾ ಎಲ್ ಮಾತನಾಡಿ, ನಿರ್ಮಲ ಅವರು ವಿದ್ಯಾರ್ಥಿ ದಶೆಯಿಂದಲೇ ಪ್ರತಿಭಾವಂತರಾಗಿದ್ದು, ಸೇವೆಯಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನಕ್ಕೆ ಹೆಸರುವಾಸಿಯಾಗಿದ್ದರು. ಅನಾರೋಗ್ಯದ ಕಾರಣದಿಂದ ಅವರು ಸ್ವಯಂ ನಿವೃತ್ತಿ ಪಡೆಯುತ್ತಿರುವುದು ಬೇಸರದ ಸಂಗತಿ ಎಂದರು.

ವೈದ್ಯಾಧಿಕಾರಿ ಡಾ. ರಂಜಿತ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಇಬ್ಬರೂ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದು, ಅವರ ಮುಂದಿನ ಬದುಕಿಗೆ ಶುಭ ಹಾರೈಸಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವೀಣಾ ಎಂ.ಪಿ., ಪ್ರಥಮ ದರ್ಜೆ ಸಹಾಯಕಿ ವಿಜಯಲಕ್ಷ್ಮಿ ಹಾಗೂ ಆಶಾ ಕಾರ್ಯಕರ್ತೆಯರಾದ ಪ್ರಭಾವತಿ, ರೇಖಾ ಮತ್ತು ಯಶೋಧ ಅವರು ನಿರ್ಮಲ ಹಾಗೂ ನಾಗರತ್ನ ಅವರೊಂದಿಗೆ ಕಳೆದ ಸೇವಾ ದಿನಗಳ ನೆನಪುಗಳನ್ನು ಹಂಚಿಕೊಂಡು ಭಾವಪೂರ್ಣವಾಗಿ ಶುಭ ಕೋರಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಮಲ, ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣ ಸ್ವಯಂ ನಿವೃತ್ತಿಯ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ಸಹೋದ್ಯೋಗಿಗಳಿಂದ ದೊರೆತ ಪ್ರೀತಿ ಮತ್ತು ಗೌರವವನ್ನು ಎಂದಿಗೂ ಮರೆಯುವುದಿಲ್ಲ ಎಂದು ಭಾವುಕರಾದರು.

ನಾಗರತ್ನ ಮಾತನಾಡಿ, ಕಡ್ಡಾಯ ವರ್ಗಾವಣೆಯ ಹಿನ್ನೆಲೆಯಲ್ಲಿ ಇಲ್ಲಿಂದ ತೆರಳಬೇಕಾಗಿದ್ದು, ಮೇಗರವಳ್ಳಿಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಅಪಾರ ಪ್ರೀತಿ ಮತ್ತು ಸಹಕಾರ ದೊರೆತಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಗಮಿಸಿದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಮತಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಿಯೋಜನೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದ ಆಗುಂಬೆಯ ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಆಶಾ ಅವರನ್ನು ಸಹ ಗೌರವಿಸಲಾಯಿತು.

ನಿರ್ಮಲ ಅವರ ಬಂಧು ನಿಶ್ಮಿತ ಮಾತನಾಡಿ, ಇಂತಹ ಭಾವನಾತ್ಮಕ ಬೀಳ್ಕೊಡುಗೆಯನ್ನು ಮೊದಲ ಬಾರಿಗೆ ಕಂಡಿದ್ದು, ಇದು ಉತ್ತಮ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫಾರ್ಮಸಿ ಅಧಿಕಾರಿ ಸನ್ನಿಧಿ, ಬಿಪಿಎಂ ಗಿರಿ ಡಿ.ಟಿ., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪರಮೇಶ್ವರಪ್ಪ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಸಲ್ಮಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅನಿತ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರೆ, ಆಶಾ ಕಾರ್ಯಕರ್ತೆ ತೇಜಾವತಿ ಸ್ವಾಗತಿಸಿದರು. ರೂಪ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now