ಪುತ್ತೂರು: ಪಿಕಪ್‌ನಲ್ಲಿ 11 ಜಾನುವಾರುಗಳ ಹಿಂಸಾತ್ಮಕ ಸಾಗಾಟ ಪ್ರಕರಣ: ಪರಾರಿಯಾಗಿದ್ದ ಇಬ್ಬರು ವಶಕ್ಕೆ!

ಪುತ್ತೂರು: ಪಿಕಪ್‌ನಲ್ಲಿ 11 ಜಾನುವಾರುಗಳ ಹಿಂಸಾತ್ಮಕ ಸಾಗಾಟ ಪ್ರಕರಣ: ಪರಾರಿಯಾಗಿದ್ದ ಇಬ್ಬರು ವಶಕ್ಕೆ!
0Shares

ಪುತ್ತೂರು: ಪಿಕಪ್ ವಾಹನದಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ, ಅಗತ್ಯ ಪರವಾನಿಗೆ ಇಲ್ಲದೆ ಕೇರಳದ ಕಡೆಗೆ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ ಇಬ್ಬರನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಪ್ರಕರಣದಲ್ಲಿ ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆರ್ಯಾಪು ನಿವಾಸಿ ಶಿವಪ್ರಸಾದ್‌ನ ಮನೆಗೂ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ.

ಅಕ್ಟೋಬರ್ 5ರಂದು ಬೆಳಗ್ಗೆ ಬಲ್ನಾಡು ಗ್ರಾಮದ ಬೆಳೆಯೂರುಕಟ್ಟೆ ಬಳಿ ಈ ಘಟನೆ ನಡೆದಿತ್ತು. ಜಾನುವಾರುಗಳನ್ನು ಅಕ್ರಮವಾಗಿ ಕೇರಳದ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರು ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದರು.ಈ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ವಾಹನವನ್ನು ತಡೆದ ತಕ್ಷಣ ಚಾಲಕ ಹಾಗೂ ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದರು.
ಜಾನುವಾರುಗಳನ್ನು ಸಾಗಿಸಲು ಅಗತ್ಯ ಪರವಾನಿಗೆ ಪಡೆಯದೆ, ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದ ಕಡೆಗೆ ಕೊಂಡೊಯ್ಯಲಾಗುತ್ತಿತ್ತು ಎಂಬ ಆರೋಪದ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಆರ್ಯಾಪು ನಿವಾಸಿ ಶಿವಪ್ರಸಾದ್‌ನನ್ನು ಬಂಧಿಸಿದ್ದರು. ಬಳಿಕ ಪ್ರಕರಣದಲ್ಲಿ ಪರಾರಿಯಾಗಿದ್ದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುಡಿಪು ನಿವಾಸಿ ಮಾಶಿಕ್ ಹಾಗೂ ಬಂಟ್ವಾಳದ ಪೇರಮುಗೇರು ನಿವಾಸಿ ಅಬ್ಬಾಸ್ ಅವರ ಪುತ್ರ ಇಬ್ರಾಹಿಂನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯಾಪು ಗ್ರಾಮದ ದೇವಸ್ಯದಲ್ಲಿರುವ ಶಿವಪ್ರಸಾದ್‌ನ ಮನೆಗೆ ತೆರಳಿದ ಪೊಲೀಸರು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಇತರ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now