
ಕುಂದಾಪುರ : ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ ಮೂಲದ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಶುಕ್ರವಾರ ಬೆಳಗ್ಗೆ ವಿಮಾನದ ಮೂಲಕ ಊರಿಗೆ ತರಲಾಗಿದ್ದು, ಕುಂದಾಪುರದ ಸಿಎಸ್ ಐ ಸಮುದಾದಯದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮ್ಮಿಸಿದ ಪ್ರಕಾಶ್ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕುಟುಂಬಸ್ಥರು ಕುಂದಾಪುರದ ಹೊನ್ನನಕೇರಿಯಲ್ಲಿರುವ ಮನೆಗೆ ತಂದು, ಅಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದರು. ಕುಂದಾಪುರದ ಸಿಎಸ್ ಐ ಕೃಷ್ಣಾ ಚರ್ಚ್ ನ ಧರ್ಮಗುರು ರೇ.ಫಾ. ಇಮಾನ್ಯುವೆಲ್ ಜಯಕ್ಟರ್ ಅಂತಿಮ ವಿಧಿಯ ಧಾರ್ಮಿಕ ಪ್ರಕ್ರಿಯೆಗಳನ್ನು ನೆರವೇರಿಸಿದರು.


ಅಲ್ಲಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಇರುವ ಅವರ ಸಮುದಾಯದ ರುದ್ರಭೂಮಿಗೆ ತಂದು ಸಕಲ ವಿಧಿಗಳನ್ನು ನೆರವೇರಿಸಿ, ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಶಾಸಕ ಕಿರಣ್ ಕುಮಾರ್ ಕೊಡ್ಲಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಮೀಳಾ ಜತ್ತನ್ನ, ಸಹೋದರ ಪ್ರಶಾಂತ್ ಕುಂದರ್, ಅಕ್ಕ ಅನಿತಾ, ಅಪಾರ ಸಂಖ್ಯೆಯ ಕುಟುಂಬಸ್ಥರು, ಸ್ನೇಹಿತರು, ಬಂಧುಗಳು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ಕೊಲೆಯಾದ ಬಳಿಕ ಪತ್ನಿ ಮತ್ತು ಪುತ್ರ ನಾಪತ್ತೆಯಾಗಿದ್ದು, ಮೃತ ಪ್ರಕಾಶ್ ಕುಂದರ್ ರವರನ್ನು ಅತ್ಯಂತ ಅಮಾನುಷವಾಗಿ ಕೊಲೆಗೈಯಲಾಗಿತ್ತು. ಗರಗಸದ ಮೂಲಕ 9 ತುಂಡುಗಳಾಗಿ ವಿಭಾಗಿಸಿ, ತನ್ನದೇ ಕಾರಿನಲ್ಲಿ ತುಂಬಿಸಿಟ್ಟಂತ ರೀತಿಯಲ್ಲಿ ಪ್ರಕಾಶ್ ಕುಂದರ್ ಮೃತ ದೇಹ ಪತ್ತೆಯಾಗಿತ್ತು. 20 ವರ್ಷದ ದಾಂಪತ್ಯ ಜೀವನ ಇಂತಹ ಅಮಾನುಷ ಕೊಲೆಗೈಯುವ ಮೂಲಕ ಕೊನೆಗೊಂಡದ್ದು ಮಾತ್ರ ವಿಪರ್ಯಾಸ. ಪತ್ನಿ, ಪುತ್ರ ನ ಮೇಲೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಸಾರ್ವಜನಿಕರು ಮತ್ತು ಕುಟುಂಬಸ್ಥರು ಆಗ್ರಹಿಸಿದ್ದಾರೆ.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now