
ಉಡುಪಿ, ಸೆಪ್ಟಂಬರ್ 17 : ಭಗವಂತನ ಶ್ರೀ ಕೃಷ್ಣನ ಅವತಾರವು ವಿಶಿಷ್ಟವಾದದ್ದು. ಕೃಷ್ಣನ ರೂಪದಂತೆ ಆತನ ಅವತಾರವೂ ಆಕರ್ಷಕ. ಕೆಟ್ಟದನ್ನು ದಮನ ಮಾಡಿ ಜಗತ್ ಕಲ್ಯಾಣಕ್ಕಾಗಿ ಉತ್ತಮ ಮಾರ್ಗವನ್ನು ನೀಡಿದ ಶ್ರೀ ಕೃಷ್ಣನ ಸಂದೇಶ ಪಾಲನೆಯಿಂದ ಜಗತ್ತಿನ ಸುಸೂತ್ರ ನಿರ್ವಹಣೆ ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅವರು ರವಿವಾರ ರಾಜಾಂಗಣದ ಶ್ರೀ ಕೃಷ್ಣ ಮಠದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಇವರ ಸಹಯೋಗದಲ್ಲಿ ನಡೆದ ಸಾಂಸ್ಕೃತಿ ಸೌರಭ 2025-26ನೇ ಸಾಲಿನ ಹಿರಿಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು ಪಾಲಕರ ಮುಖ್ಯ ಕರ್ತವ್ಯ. ಅಂತೆಯೇ ಜಗತ್ತನ್ನು ಸೃಷ್ಠಿಸಿದ ಭಗವಂತನು ಜಗತ್ತಿನ ಕಲ್ಯಾಣಕ್ಕಾಗಿ ಶ್ರೀ ಕೃಷ್ಣನ ರೂಪದಲ್ಲಿ ಅವತರಿಸಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರ ರಕ್ಷಿಸಿದರು. ಜಗತ್ತು ಉತ್ತಮ ರೀತಿಯಲ್ಲಿ ಸಾಗಬೇಕಾದರೆ ಸಜ್ಜನರಿಗೆ ಸದಾ ಪೋತ್ಸಾಹ ದೊರೆಯಬೇಕು ಹಾಗಾದಾಗ ಮಾತ್ರ ಜಗತ್ತಿನ ಕಲ್ಯಾಣ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯಶ್ಪಾಲ್ ಎ ಸುವರ್ಣ, ಭಾರತೀಯ ಸಂಪ್ರಾದಾಯವು ಅನನ್ಯವಾದದ್ದು, ಇಂದಿನ ಯುವ ಪೀಳಿಗೆಯು ಭಾರತೀಯ ಸಂಪ್ರದಾಯ, ಆಚಾರ-ವಿಚಾರಗಳನ್ನು ಮರೆಯದೇ ಪಾಲಿಸಬೇಕು. ಜಿಲ್ಲೆಯಲ್ಲಿ ಶ್ರೀ ಕೃಷ್ಣ ಜನ್ಮಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದ್ದು, ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ್ಮಾಷ್ಟಮಿಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಓಂಪ್ರಕಾಶ್ ಭಟ್ ಸಂಪಾದಿತ “ಸುಗುಣೇಂದ್ರತೀರ್ಥರು ಕಂಡಂತೆ ಶ್ರೀ ಕೃಷ್ಣ’ ಪುಸ್ತಕ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಲಯನ್ಸ್ ಗವರ್ನರ್ ಸಪ್ನಾ ಸುರೇಶ್, ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀಧರ ಮಯ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಿದ್ವಾಂಸ ಡಾ. ಗೋಪಾಲಾ ಚಾರ್ ಹಾಗೂ ವಿಜೇತ ಶೆಟ್ಟಿ ನಿರೂಪಿಸಿದರು.
ಬಳಿಕ ಶ್ರೀಕೃಷ್ಣ ಪುತ್ರ ವಿವಾಹ ಯಕ್ಷಗಾನ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಶ್ರೀ ಕೃಷ್ಣ ಸಂಗೀತ ಸುಧೆ, ಶ್ರೀ ಕೃಷ್ಣ ಲೀಲೋತ್ಸವ, ಜನಪದ ನೃತ್ಯ, ಕಂಸಾಳೆ ಮತ್ತು ವೀರಗಾಸೆ, ದಾಸರ ಪದಗಳು, ಚಂಡೆವಾದನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now