
ಕರ್ಣಾಟಕ ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಂತತಾಗಿ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಉದಯ ಕುಮಾರ್ ಹೆಬ್ಬಾರ್ ನೇಮಕಗೊಂಡಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ 4 ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಉದಯ ಕುಮಾರ್ ಹೆಬ್ಬಾರ್ ಅವರು ನಂಚಾರು ಗ್ರಾಮದ ತಾರಿಕಟ್ಟೆಯ ದಿ. ರಾಮಕೃಷ್ಣ ಹೆಬ್ಬಾರ್ ಹಾಗೂ ದಿ. ಶ್ರೀದೇವಿ ಹೆಬ್ಬಾರ್ ಅವರ ಪುತ್ರರಾಗಿದ್ದು, ಸೂರ್ಗೋಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಗೋಳಿಯಂಗಡಿಯಲ್ಲಿ ಪ್ರೌಢ ಶಿಕ್ಷಣ, ಕುಂದಾಪುರ ಪ. ಪೂ. ಕಾಲೇಜಿನಲ್ಲಿ ಪ. ಪೂರ್ವ ಶಿಕ್ಷಣ ಹಾಗೂ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿ ಶಿಕ್ಷಣ ಪಡೆದವರು. ನಂತರ ಧಾರವಾಡದ ಕರ್ನಾಟಕ ವಿ. ವಿ. ಯಲ್ಲಿ ಎಂ. ಕಾಂ. ಸ್ನಾತಕೋತ್ತರ ಪದವಿ ಪಡೆದರು.
ಸಾಮಾನ್ಯ ಕುಟುಂಬದ ಸದಸ್ಯನಾಗಿದ್ದು, ಕುಂದಾಪುರದಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಬೆಳಿಗ್ಗೆ-ಸಂಜೆ ಸ್ಥಳೀಯ ಪಾರಿಜಾತ ಹೋಟೆಲ್ನಲ್ಲಿ ಸೇವೆ ಸಲ್ಲಿಸುತ್ತಾ, ಹೋಟೆಲ್ ನ ವಸತಿಯಲ್ಲಿಯೇ ವಾಸವಾಗಿದ್ದು, ಶಿಕ್ಷಣ ಪೂರೈಸಿದವರು. ಅವರ ಕಠಿಣ ಪರಿಶ್ರಮ, ಅವರಿಗೆ ಉತ್ತಮ ಭವಿಷ್ಯ ರೂಪಿಸಿತು. ಬ್ಯಾಂಕಿಂಗ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಉನ್ನತ ಹುದ್ದೆ ಹೊಂದಿದ್ದರೂ ತನ್ನ ಊರು, ಶಾಲೆ, ಮರೆಯದೇ ಕಲಿತ ಶಾಲೆಗಳ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿದ್ದಾರೆ. ಬೆಳ್ವೆ ಪರಿಸರ ಇವರಿಗೆ ಆಪ್ತವಾಗಿದೆ. ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜು ಆಡಳಿತ ಮಂಡಳಿ ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದ ಇವರ ಸಾಧನೆಗೆ ಅಭಿನಂದಿಸಿದ್ದಾರೆ. ಕರ್ಣಾಟಕ ಬ್ಯಾಂಕಿನ ನೂತನ ಜವಾಬ್ದಾರಿಗೆ ಶುಭ ಹಾರೈಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now