
ಸಿದ್ದಾಪುರ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25ರಿಂದ 28ರವರೆಗೆ ನಡೆದ ಕೃಷಿ ಮೇಳ–2026ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶೇಮೇಮನೆಯ ಪ್ರಗತಿಪರ ಕೃಷಿಕ ಮಹಿಳೆ ಮಮತಾ ವಿನಾಯಕ ಭಟ್ ರಿಗೆ ಪ್ರತಿಷ್ಠಿತ ‘ನಾವೀನ್ಯ ಹಾಗೂ ಪ್ರಗತಿಪರ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷಿಯಲ್ಲಿ ಸುಸ್ಥಿರತೆ, ನಾವೀನ್ಯತೆ, ಗೃಹ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಗ್ರಾಮೀಣ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಮಮತಾ ಭಟ್ ಅವರು ಸಾಂಪ್ರದಾಯಿಕ ಕೃಷಿಗೆ ಆಧುನಿಕ ಮೌಲ್ಯವರ್ಧನಾ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹಸಿ ಬಾಳೆಕಾಯಿಯಿಂದ ಪೌಷ್ಟಿಕ ಹಿಟ್ಟು ‘ಬಕಾಹು’ (BaKaHu) ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸಿ, ಸ್ಥಳೀಯ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆಯ ಅವಕಾಶ ಕಲ್ಪಿಸಿದ್ದಾರೆ.
ತಮ್ಮ ಸಾಧನೆಯನ್ನು ಸ್ವಂತಕ್ಕೆ ಸೀಮಿತಗೊಳಿಸದೆ ಸುತ್ತಮುತ್ತಲಿನ ಗ್ರಾಮಗಳ ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಕೃಷಿಕರಿಗೆ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ತಂತ್ರಜ್ಞಾನಗಳ ಕುರಿತು ತರಬೇತಿ ನೀಡುತ್ತಿದ್ದಾರೆ. ಇವರ ಕಾರ್ಯವನ್ನು ಅಂತರರಾಷ್ಟ್ರೀಯ ಸಂಸ್ಥೆ ಆಕ್ಸೆಸ್ ಅಗ್ರಿಕಲ್ಚರ್ ದಾಖಲಿಸಿ ಜಾಗತಿಕ ಮಟ್ಟದಲ್ಲಿ ಪರಿಚಯಿಸಿದೆ. ನಬಾರ್ಡ್ ಕೂಡ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
ಕೃಷಿ ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತವಲ್ಲ; ಮೌಲ್ಯವರ್ಧನೆ ಮತ್ತು ನಾವೀನ್ಯತೆಯ ಮೂಲಕ ಅದನ್ನು ಲಾಭದಾಯಕ ಹಾಗೂ ಸಮಾಜಮುಖಿ ಉದ್ಯಮವನ್ನಾಗಿ ರೂಪಿಸಬಹುದು ಎಂಬುದಕ್ಕೆ ಮಮತಾ ಭಟ್ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now