
ಶಿರ್ವ, ಸೆ. 27: ಶಿರ್ವದ ಸಂತ ವಿನ್ಸೆಂಟ್ ಡಿ ಪೌಲ್ ಸಂಘದ 51ನೇ ವರ್ಷದ ವಾರ್ಷಿಕೋತ್ಸವವು ಡಾನ್ ಬಾಸ್ಕೋ ಶಾಲೆಯ ಪ್ರಾಂಗಣದಲ್ಲಿ ಭಕ್ತಿಭಾವ ಹಾಗೂ ಸೇವಾ ಮನೋಭಾವದೊಂದಿಗೆ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ವಂ. ಅನಿಲ್ ರೋಡ್ರಿಗಸ್ ಅವರು ಭಾಗವಹಿಸಿ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಅತಿ ವಂ. ಚಾರ್ಲ್ಸ್ ಮೆನೇಜಸ್ ಅವರು ವಹಿಸಿದ್ದರು.


ಅಧ್ಯಕ್ಷೀಯ ಸಂದೇಶದಲ್ಲಿ ಮಾತನಾಡಿದ ಅತಿ ವಂ. ಚಾರ್ಲ್ಸ್ ಮೆನೇಜಸ್ ಅವರು, “ಸೇವೆಯೇ ಧರ್ಮದ ಮೂಲ. ದಾನ ಮಾಡುವ ಮೂಲಕ ನಾವು ದೇವರ ಕೃಪೆಗೆ ಪಾತ್ರರಾಗುತ್ತೇವೆ” ಎಂದು ಹೇಳಿದರು. ಸಂಘದ ಸದಸ್ಯರು ತಮ್ಮ ವೈಯಕ್ತಿಕ ಸಂಪನ್ಮೂಲಗಳ ಜೊತೆಗೆ ದಾನಿಗಳ ಸಹಕಾರವನ್ನು ಪಡೆದು, ಅತ್ಯಂತ ಅಗತ್ಯವಿರುವ ಕುಟುಂಬಗಳಿಗೆ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ 50ನೇ ವರ್ಷದ ಸಂದರ್ಭದಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟಿರುವುದು ಸಂಘದ ಸೇವಾ ಚಟುವಟಿಕೆಗಳಿಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ವಂ. ರೋಲ್ವಿನ್ ಅರನ್ನ, ಘಟಕದ ಉಪಾಧ್ಯಕ್ಷ ಮೋಹನ್ ನೋರನ್ನ, ಕಾರ್ಯದರ್ಶಿ ಡೋರಿನ್ ಮೊರಾಸ್, ಖಜಾಂಚಿ ಹಾಗೂ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಲಿಯನ್ ರೋಡ್ರಿಗಸ್, ಪಾಲನಾ ಮಂಡಳಿಯ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ ಹಾಗೂ 20ನೇ ಆಯೋಗದ ಸಂಚಾಲಕಿ ಶಾಲಿನಿ ಕೋರ್ಡ ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ಅಂಗವಾಗಿ 13 ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು. ಸಂಘದ 21 ಮಂದಿ ಸದಸ್ಯರು, ಪೋಷಕರು, ದಾನಿಗಳು ಹಾಗೂ ಕ್ಯಾಥೊಲಿಕ್ ಸಭಾ ಉಡುಪಿ ಪ್ರಾಂತ್ಯದ ಅಧ್ಯಕ್ಷ ಮೆಲ್ವಿನ್ ಅರನ್ನ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೋರ್ಬರ್ಟ್ ಮಚಾದೋ ನಿರೂಪಿಸಿದರು. ಕ್ಲಾರಾ ಕೂತಿನ್ನೋ ವಂದಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now