
ನವದೆಹಲಿ: ದೇಶಾದ್ಯಂತ ಮಕ್ಕಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಬೊಜ್ಜು ಮತ್ತು ಅನಾರೋಗ್ಯಕರ ಜೀವನಶೈಲಿಗೆ ಬ್ರೇಕ್ ಹಾಕಲು ಭಾರತ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತಯಾರಿಸಿರುವ ಹೊಸ ನಿಯಮಾವಳಿಗಳ ಪ್ರಕಾರ, ಶಾಲೆಯ 50 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಪ್ರಮಾಣ ಹೊಂದಿರುವ ಆಹಾರ ಪದಾರ್ಥಗಳ ಮಾರಾಟವನ್ನು ನಿರ್ಬಂಧಿಸಲಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳನ್ನು ಅಸಂಸ್ಥಾಪಿತ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯಿಂದ ದೂರವಿಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಹೊಸ ನಿಯಮ ಜಾರಿಗೆ ಬಂದರೆ ದೇಶಾದ್ಯಂತ ಇರುವ ಸುಮಾರು 15 ಲಕ್ಷ ಶಾಲೆಗಳ ಸುತ್ತಮುತ್ತಲಿನ ಅಂಗಡಿಗಳು, ಉಪಹಾರ ಗೃಹಗಳು ಹಾಗೂ ಬೀದಿಬದಿ ಆಹಾರ ಮಳಿಗೆಗಳ ಮೇಲೆ ನೇರ ಪರಿಣಾಮ ಬೀರಲಿದೆ.
ಮಹಾರಾಷ್ಟ್ರ ಸರ್ಕಾರವು ಈಗಾಗಲೇ ಶಾಲೆಯ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು, ಸಕ್ಕರೆ ಮತ್ತು ಉಪ್ಪು ಹೊಂದಿರುವ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇತ್ತೀಚೆಗೆ ನಡೆಸಿದ ತನಿಖೆಯಲ್ಲಿ 133 ಅಂಗಡಿಗಳು ಈ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದು, ಅದರಲ್ಲಿ 51 ಅಂಗಡಿಗಳ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.
ವರದಿಗಳ ಪ್ರಕಾರ, 2015 ರಲ್ಲಿ ಭಾರತದಲ್ಲಿ ಬೊಜ್ಜಿನಿಂದ ಬಳಲುತ್ತಿದ್ದ 5 ರಿಂದ 19 ವರ್ಷದ ಮಕ್ಕಳ ಸಂಖ್ಯೆ 2.8 ಕೋಟಿಯಷ್ಟಿತ್ತು. ಈ ಸಂಖ್ಯೆಯು 2025 ರ ವೇಳೆಗೆ 4.1 ಕೋಟಿಗೆ ಏರಿಕೆಯಾಗಿದ್ದು, 2040 ರ ವೇಳೆಗೆ 5.6 ಕೋಟಿಗೆ ತಲುಪುವ ಭೀತಿ ಇದೆ ಎಂದು ‘ವರ್ಲ್ಡ್ ಒಬೆಸಿಟಿ ಫೆಡರೇಶನ್’ (World Obesity Federation) ថថ ថ្មដដ. ಮಕ್ಕಳಲ್ಲಿ ಆಹಾರ ಪದ್ಧತಿ ಬದಲಾಗಿರುವುದು ಹಾಗೂ ವಿದೇಶಿ ಬ್ರಾಂಡ್ಗಳ ಅಗ್ಗದ ಜಂಕ್ ಫುಡ್ಗಳಿಗೆ ಆಕರ್ಷಿತರಾಗುತ್ತಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಭಾರತೀಯ ಆಹಾರ ಉದ್ಯಮ ಒಕ್ಕೂಟ ಈ ನಿಯಮಕ್ಕೆ ಕಳವಳ ವ್ಯಕ್ತಪಡಿಸಿದ್ದು, “ಹಲವು ಶಾಲೆಗಳು ಗಿಜಿಗುಡುವ ಮಾರುಕಟ್ಟೆ ಪ್ರದೇಶಗಳಲ್ಲೇ ಇರುವುದರಿಂದ ಈ ನಿಯಮ ಪಾಲಿಸುವುದು ಕಷ್ಟ. ಇದರಿಂದ ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ಈ ನಿಯಮವನ್ನು ಶಾಲೆಯ ಒಳಗಿನ ಆವರಣಕ್ಕೆ ಮಾತ್ರ ಸೀಮಿತಗೊಳಿಸಬೇಕು” ಎಂದು ಮನವಿ ಮಾಡಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now