ಸಮಾಜದಲ್ಲಿದ್ದ ಅಧರ್ಮ, ಅನೀತಿ ವಿನಾಶ ಮಾಡಿದ ಮಹಾನ್ ಚೇತನ ಶ್ರೀಕೃಷ್ಣ : ಎಂ.ಎ ಗಫೂರ್

ಸಮಾಜದಲ್ಲಿದ್ದ ಅಧರ್ಮ, ಅನೀತಿ ವಿನಾಶ ಮಾಡಿದ ಮಹಾನ್ ಚೇತನ ಶ್ರೀಕೃಷ್ಣ : ಎಂ.ಎ ಗಫೂರ್
0Shares

ಉಡುಪಿ ಸೆಪ್ಟಂಬರ್ 04 : ಸಮಾಜದಲ್ಲಿದ್ದ ಅಧರ್ಮ, ಅನೀತಿ ಹಾಗೂ ಅತ್ಯಂತ ಕೆಟ್ಟ ವ್ಯವಸ್ಥೆ ಉಂಟಾದಾಗ ಮಹಾನ್ ಚೇತನರು ಜನಿಸುತ್ತಾರೆ ಎನ್ನುವುದಕ್ಕೆ ಶ್ರೇಷ್ಠ ನಿದರ್ಶನ ಶ್ರೀ ಕೃಷ್ಣ. ಇವರು ವಿಷ್ಣುವಿನ ಎಂಟನೇ ಅವತಾರವಾಗಿ ಜನಿಸುವುದರೊಂದಿಗೆ ಸಾವಿರಾರು ವರ್ಷಗಳ ಹಿಂದೆ ಸಮಾಜದಲ್ಲಿದ್ದ ಅಧರ್ಮ, ಅನೀತಿ ವಿನಾಶ ಮಾಡಿದ ಮಹಾನ್ ಚೇತನ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.

ಇಂದು ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಕೃಷ್ಣ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಉಡುಪಿ ಶ್ರೀಕೃಷ್ಣನ ನಾಡು. ಇಲ್ಲಿನ ಜನತೆಯ ಬಹುದೊಡ್ಡ ಹಬ್ಬ ಶ್ರೀ ಕೃಷ್ಣ ಜನ್ಮಾಷ್ಠಮಿ. ಇಂತಹ ಕೃಷ್ಣನಗರಿ ಉಡುಪಿಯಲ್ಲಿ ಇಂದು ಅತ್ಯಂತ ಸಂಭ್ರಮದಿಂದ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದ್ದು, ವೇಷಧಾರಿಗಳು ವಿವಿಧ ಬಗೆಯ ವೇಷ ತೊಟ್ಟು ನಗರದಾದ್ಯಂತ ಸಂಚರಿಸಿ, ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದಾರೆ. ಕಲೆ ಮತ್ತು ಸಂಸ್ಕೃತಿ ಉಳಿದಾಗ ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಸಾಧ್ಯ ಎನ್ನುವುದಕ್ಕೆ ಈ ಹಬ್ಬ ದೊಡ್ಡ ಉದಾಹರಣೆ ಎಂದರು.

ಸರ್ವಧರ್ಮ – ಸಹಬಾಳ್ವೆಯ ಜೀವನಶೈಲಿ ಉಡುಪಿ ಜಿಲ್ಲೆಯ ಜನರಲ್ಲಿ ಕಾಣಬಹುದಾಗಿದೆ. ಭವಿಷ್ಯ ನಿರ್ಮಾಣದ ರೂವಾರಿಗಳಾಗಿರುವ ವಿದ್ಯಾರ್ಥಿಗಳು ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಸಾರಿರುವ ಸಂದೇಶಗಳನ್ನು ಜೀವನದಲ್ಲಿ ಅನುಸರಿಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಆಗ ಇಂತಹ ಮಹಾನ್ ಚೇತನರ ಜಯಂತಿ ಆಚರಣೆಯು ಅರ್ಥಪೂರ್ಣವಾಗುತ್ತದೆ ಎಂದರು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಶ್ರೀಕೃಷ್ಣನ ಜನ್ಮ ದಿನವನ್ನು ಇಂದು ಉಡುಪಿ ನಗರದಾದ್ಯಂತ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತಿದೆ. ದುಷ್ಟರನ್ನು ಶಿಕ್ಷಿಸಲು ಶಿಷ್ಠರ ರಕ್ಷಣೆಗಾಗಿ ಜನ್ಮ ತಾಳಿದವರು ಶ್ರೀಕೃಷ್ಣ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರವಾಗಿ ನಿಂತು ಧರ್ಮಕ್ಕೆ ಜಯತಂದು ಕೊಟ್ಟ ಆದರ್ಶ ಪುರುಷ ಶ್ರೀಕೃಷ್ಣ ದೇವರು ಎಂದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now