
ಉದ್ಯಾವರ : ನಾವು ದಾನ ಮಾಡುವ ಒಂದು ಯುನಿಟ್ ರಕ್ತ ಒಂದು ಮಗುವನ್ನು, ಒಬ್ಬ ತಂದೆಯನ್ನು, ಒಬ್ಬ ತಾಯಿಯನ್ನು ಅಥವಾ ಒಬ್ಬ ಬಂಧುವನ್ನು ಉಳಿಸಿಕೊಳ್ಳಬಹುದು. ಒಂದು ಯೂನಿಟ್ ರಕ್ತದಿಂದ ಮೂರು ಜನರಂತು ಉಳಿದು ಕೊಳ್ಳುತ್ತಾರೆ. ಹಾಗಾಗಿ ರಕ್ತದಾನ ಶಿಬಿರ ಅನ್ನೋದು ಅದರ ನಿಜ ಅರ್ಥದಲ್ಲಿ ಜೀವದಾನ ಶಿಬಿರ ಎಂದಾಗಿದೆ. ಇಂತಹ ಒಂದು ಸುತ್ಯಾರ್ಹವಾದ ಕೆಲಸವನ್ನು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸತತವಾಗಿ ಮಾಡಿಕೊಂಡು ಬಂದು ತಮ್ಮ ನಾಯಕರಾದ ಮಂಜುನಾಥ ಉದ್ಯಾವರ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದು ನಿಜ ಅರ್ಥದಲ್ಲಿ ಸಂಸ್ಮರಣೆ ಅನ್ನಬಹುದು. ಏಕೆಂದರೆ ಇಲ್ಲಿ ಸಂಗ್ರಹವಾದ ರಕ್ತ ಯಾರ ಜೀವ ಉಳಿಸಲು ಬಳಕೆಯಾಗುತ್ತದೆ ಅನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಅದರಿಂದ ಜೀವ ಉಳಿಯುತ್ತದೆ ಅನ್ನೋದು ಸತ್ಯ .ಹಾಗೆ ಮಂಜುನಾಥ ಉದ್ಯಾವರರ ಬಳಿ ಯಾರಾದರೂ ಸಹಾಯ ಕೇಳಿ ಹೋದಾಗ ಅವರು ಯಾರು ? ಎಲ್ಲಿಯವರು? ಅನ್ನುವುದು ಅವರಿಗೆ ಮುಖ್ಯವೇ ಆಗುತ್ತಿರಲಿಲ್ಲ. ಆದರೂ ತನ್ನಿಂದ ಆಗುವಂತಹ ಗರಿಷ್ಠ ಸಹಾಯವನ್ನು ಮಾಡುತ್ತಿದ್ದರು. ಹಾಗಾಗಿ ಈ ರಕ್ತದಾನ ಶಿಬಿರದ ಮೂಲಕ ಅವರನ್ನು ನೆನಪಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಕರ್ನಾಟಕ ಸರಕಾರ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಅವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದ ಮತ್ತು ಗ್ರಾಮದ ಅಭಿವೃದ್ಧಿಯ ಹರಿಕಾರರು ಆಗಿದ್ದ ಮಂಜುನಾಥ್ ಉದ್ಯಾವರ್ ಸಂಸ್ಮರಣಾ ಕಾರ್ಯಕ್ರಮ ಮಂಜಣ್ಣ ನೆನಪು – 14 ಅಂಗವಾಗಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಜರಗಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರಿಯುತ್ತಾ, ಮಂಜಣ್ಣನನ್ನು ನೆನೆಪಿಸುವ ನೆವದಲ್ಲಿ ಈ ರಕ್ತದಾನ ಶಿಬಿರ ವರ್ಷಕ್ಕೆ ಒಂದು ಬಾರಿಯಾಗದೆ ಹೆಚ್ಚು ಹೆಚ್ಚು ಬಾರಿ ಜರಗುತ್ತಿರಲಿ ಇದರಿಂದ ಮಂಜಣ್ಣ ನಿಜ ಅರ್ಥದಲ್ಲಿ ಜನರ ಮಧ್ಯೆ ಬದುಕುತ್ತಿರುತ್ತಾರೆ ಎಂದರು.

ಮುಖ್ಯ ಅತಿಥಿ ಆಗಮಿಸಿದ ಕಟಪಾಡಿ ಬ್ರಹ್ಮಶ್ರೀ ಮೀಡಿಯಾ ನೆಟ್ವರ್ಕ್ ಆಡಳಿತ ನಿರ್ದೇಶಕರಾದ ಸುನಿಲ್ ಡಿ . ಬಂಗೇರ ಅವರು ಮಾತನಾಡುತ್ತಾ, ಮಂಜಣ್ಣನನ್ನು ನಾವು ಕಾರ್ಯಕ್ರಮಗಳ ಮೂಲಕ ನೆನಪಿಸ ಬಹುದು ಅಷ್ಟೇ, ಆದರೆ ಅವರ ಮನಸ್ಸಲ್ಲಿದ್ದ ಅಭಿವೃದ್ಧಿಯ ಕಲ್ಪನೆಗಳು. ಜನಪರ ಚಿಂತನೆಗಳನ್ನು ನಮಗೆ ಎನಿಸಲು ಸಾಧ್ಯವಿಲ್ಲ. ಅಭಿವೃದ್ಧಿಯ ಕೆಲಸಗಳಲ್ಲಾಗಲಿ, ಜನಪರ ಕೆಲಸಗಳಲ್ಲಾಗಲಿ ಅವರದ್ದೇಯಾದ ಚಿಂತನೆಗಳು ಮಂಜಣ್ಣನವರಲ್ಲಿ ಇತ್ತು. ಮತ್ತು ಅವು ಜನಪರವಾಗಿಯೇ ಇರುತ್ತಿತ್ತು .ಅಂತವರನ್ನು ಕಳಕೊಂಡದ್ದು ನಿಜ ಅರ್ಥದಲ್ಲಿ ಉದ್ಯಾವರ ಊರಿಗೆ ಅಲ್ಲ ಇಡೀ ಸಮುದಾಯಕ್ಕೊಂದು ತುಂಬಲಾರದ ನಷ್ಟ ಎನ್ನಬಹುದು. ಮಂಜಣ್ಣನ ಜನಪರ ಚಿಂತನೆಗಳು ಏನಿತ್ತು ಎನ್ನುವುದನ್ನು ಅಭ್ಯಾಸಿಸಿ ಅವುಗಳನ್ನು ಸಾಕಾರಗೊಳಿಸಲು ಮುಂದಿನ ದಿವಸಗಳಲ್ಲಿ ನಾವೆಲ್ಲ ಪ್ರಯತ್ನಿಸಿದರೆ ಅದು ನಿಜಾರ್ಥದಲ್ಲಿ ಒಬ್ಬ ಸಾಧಕನಿಗೆ ಕೊಡುವ ಗೌರವದ ನಡೆಯಾಗುತ್ತದೆ .ಮಂಜಣ್ಣನ ಹೆಸರಿನಲ್ಲಿ ಒಂದು ಶಾಶ್ವತ ಸ್ಮಾರಕವನ್ನು ಮುಂದಿನ ದಿನಗಳಲ್ಲಿ ಸಂಸ್ಥೆಯ ನಿರ್ಮಿಸಲಿ ಎಂದು ಹಾರೈಸಿದರು.

ಮತ್ತೋರ್ವ ಮುಖ್ಯ ಅತಿಥಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನಿತಿನ್ ಜೆ. ಸಾಲಿಯಾನ್ ರವರು ಮಾತನಾಡುತ್ತಾ, ಉದ್ಯಾವರ ಗ್ರಾಮದಲ್ಲಿ ಮಂಜಣ್ಣ ಎಂಬುದು ಒಂದು ನೆನಪು ಮಾತ್ರವಲ್ಲ, ಒಂದು ಅದ್ಭುತ ವ್ಯಕ್ತಿತ್ವ. ಮಕ್ಕಳಿಂದ ಹಿಡಿದು ಹಿರಿಯರ ತನಕ ಬಡವರಿಂದ ಹಿಡಿದು ಶ್ರೀಮಂತರ ತನಕ ಅವರದ್ದು ಒಂದೇ ರೀತಿಯ ವರ್ತನೆ. ತನ್ನ ಬಳಿ ಬಂದ ವ್ಯಕ್ತಿಗಳ ಸಮಸ್ಯೆಗೆ ಪರಿಹಾರ ಕೊಡಿಸಲು ಅವರು ಗರಿಷ್ಠವಾಗಿ ಪ್ರಯತ್ನಿಸುತ್ತಿದ್ದರು ಮತ್ತು ಇದರಲ್ಲಿ ಯಶಸ್ವಿಯು ಆಗಿದ್ದರು ಇಂಥ ವ್ಯಕ್ತಿಯ ಕಾರ್ಯಕ್ರಮ ರಕ್ತ ದಾನದ ಮುಖಾಂತರ ಆಗುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಇದೇ ರೀತಿ ಇನ್ನಷ್ಟು ಉತ್ತಮ ಜನಪರ ಕಾರ್ಯಕ್ರಮಗಳನ್ನು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಮಾಡಲಿ. ಈ ಮೂಲಕ ಉದ್ಯಾವರದ ಜನತೆಗೆ ಇನ್ನಷ್ಟು ಸಹಾಯ ಸಹಕಾರ ದೊರೆಯಲಿ ಎಂದು ಹಾರೈಸಿದರು.
ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ವೀಣಾ ಕುಮಾರಿ ರಕ್ತದಾನದ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ರಕ್ತದಾನದ ಬಗ್ಗಿನ ತಪ್ಪುಕಲ್ಪನೆಯನ್ನು ನಿವಾರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡಿ, ಮಂಜುನಾಥ್ ಉದ್ಯಾವರ್ ಇರುವಾಗಲೇ ಪ್ರಾರಂಭಗೊಂಡ ಈ ರಕ್ತದಾನ ಶಿಬಿರ ಅವರ ಕಾಲ ನಂತರವೂ ಮುಂದುವರಿದು ಇದೀಗ 14 ವರ್ಷಗಳು ಸಂದವು. ಇದು ಮಂಜಣ್ಣನ ಜನಪರ ಕೆಲಸ ಕಾರ್ಯಗಳಿಗೆ ನಾವು ಗೆಳೆಯರು ಕೊಡುತ್ತಿರುವ ಗೌರವ. ಇದು ಸದಾ ಮುಂದುವರಿಯುವಂತಾಗಲಿ ಎಂದು ಹಾರೈಸಿದರು ಮತ್ತು ಈ ಮೂಲಕ ಮಂಜಣ್ಣ ನೆನೆಸಿಕೊಳ್ಳುವುದೇ ನಮ್ಮ ಸಾರ್ಥಕತೆಯ ಕ್ಷಣ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರು ಹಲೀಮಾ ಸಾಬ್ಜು ಟ್ರಸ್ಟ್ (ರಿ) ಆಡಳಿತ ವಿಶ್ವಸ್ಥರಾದ ಅಬ್ದುಲ್ ಜಲೀಲ್ ಸಾಹೇಬರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷರಾದ ರಿಯಾಜ್ ಪಳ್ಳಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಈ ಶಿಬಿರದಲ್ಲಿ 85 ಮಂದಿ ರಕ್ತದಾನ ಮಾಡಲು ಇಚ್ಛಿಸಿದ್ದು, 75 ಯುನಿಟ್ ರಕ್ತ ಸ್ವೀಕೃತವಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now