ಎನ್‌ಡಿಆರ್‌ಎಫ್ ಕಮಾಂಡೋಗಳಿಂದ ಶೌರ್ಯ ಸದಸ್ಯರಿಗೆ ಒಂದು ದಿನದ ವಿಪತ್ತು ನಿರ್ವಹಣಾ ತರಬೇತಿ

ಎನ್‌ಡಿಆರ್‌ಎಫ್ ಕಮಾಂಡೋಗಳಿಂದ ಶೌರ್ಯ ಸದಸ್ಯರಿಗೆ ಒಂದು ದಿನದ ವಿಪತ್ತು ನಿರ್ವಹಣಾ ತರಬೇತಿ
0Shares

ಬ್ರಹ್ಮಾವರ, ಆಗಸ್ಟ್ 26:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಬ್ರಹ್ಮಾವರ ತಾಲೂಕು ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ಇವರ ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ಬ್ರಹ್ಮಾವರ ತಾಲೂಕಿನ ಸದಸ್ಯರಿಗೆ ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಕಮಾಂಡೋಗಳ ಮೂಲಕ ಒಂದು ದಿನದ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಬಾರ್ಕೂರು ಪಟ್ಟಾಭಿರಾಮಚಂದ್ರ ಸಭಾಭವನದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಬ್ರಹ್ಮಾವರ ಆರಕ್ಷಕ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ರೀಮತಿ ಮುಕ್ತಾ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮಾತನಾಡಿದ ಅವರು, ವಿಪತ್ತು ನಿರ್ವಹಣೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗೂ ನಿರ್ದಿಷ್ಟ ತರಬೇತಿಯ ಅಗತ್ಯವಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ದಳ ಹಾಗೂ NDRF ಸೇರಿದಂತೆ ಸಂಬಂಧಿತ ತಂಡಗಳ ನೆರವನ್ನು ಪಡೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಸಿದ್ಧವಾಗಿರುವ ಶೌರ್ಯ ತಂಡಗಳು ತಕ್ಷಣ ಸ್ಪಂದಿಸುವ ಮೂಲಕ ಪೊಲೀಸ್ ಇಲಾಖೆ ಹಾಗೂ ಇತರ ರಕ್ಷಣಾ ತಂಡಗಳ ಕಾರ್ಯಕ್ಕೆ ಉತ್ತಮ ಸಹಕಾರ ನೀಡಬಲ್ಲವು. ಶೌರ್ಯ ಸದಸ್ಯರು ಪಡೆದ ತರಬೇತಿಯನ್ನು ಸಮಾಜದ ಹಿತದೃಷ್ಟಿಯಿಂದ ಬಳಸಿಕೊಂಡು, ವಿಪತ್ತಿನ ಸಂದರ್ಭದಲ್ಲಿ ಮಾನವೀಯತೆ ಮತ್ತು ಧೈರ್ಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.


ಶೌರ್ಯ ವಿಪತ್ತು ನಿರ್ವಹಣಾ ಪ್ರಾದೇಶಿಕ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ಆರಂಭ, ಅವುಗಳ ಉದ್ದೇಶ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ವಿವರಿಸಿದರು. ಪ್ರಕೃತಿ ವಿಕೋಪಗಳು ಸಂಭವಿಸಿದ ನಂತರ ಪರಿಹಾರ ಕಾರ್ಯ ನಡೆಸುವುದಕ್ಕಿಂತಲೂ ಮುನ್ನೆಚ್ಚರಿಕೆ, ಸಿದ್ಧತೆ ಮತ್ತು ತ್ವರಿತ ಸ್ಪಂದನೆಗೆ ಹೆಚ್ಚಿನ ಮಹತ್ವವಿದೆ. ಇದೇ ಉದ್ದೇಶದಿಂದ ಶೌರ್ಯ ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, ಸದಸ್ಯರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ. ವಿಪತ್ತಿನ ಸಂದರ್ಭದಲ್ಲಿ ಜೀವ ರಕ್ಷಣೆ, ಪ್ರಾಥಮಿಕ ನೆರವು ಹಾಗೂ ರಕ್ಷಣಾ ಕಾರ್ಯಗಳಲ್ಲಿ ತರಬೇತಿ ಪಡೆದ ಸ್ವಯಂಸೇವಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ NDRF ತಂಡದ ಕಮಾಂಡರ್ ಶ್ರೀ ಶಾಂತಿಲಾಲ್ ಜಟಿಯ ಅವರು ಮಾತನಾಡಿ, NDRF ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ವಿಶೇಷ ವಿಪತ್ತು ನಿರ್ವಹಣಾ ಪಡೆಯಾಗಿದ್ದು, ಸಾಮಾನ್ಯವಾಗಿ ವಿವಿಧ ಸಂಘ-ಸಂಸ್ಥೆಗಳಿಗೆ ತರಬೇತಿ ನೀಡುವುದು ಇದರ ಕಾರ್ಯವ್ಯಾಪ್ತಿಯಲ್ಲಿಲ್ಲ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಯಾವುದೇ ಸ್ವಾರ್ಥವಿಲ್ಲದೆ ಸಮಾಜದ ಭದ್ರತೆ ಮತ್ತು ರಕ್ಷಣೆಯ ಉದ್ದೇಶದಿಂದ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳನ್ನು ರೂಪಿಸಿ, ಜನರ ಸೇವೆಗೆ ಸಿದ್ಧಗೊಳಿಸಿರುವುದು ಶ್ಲಾಘನೀಯವಾಗಿದೆ. ಈ ಸಮಾಜಮುಖಿ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಶೌರ್ಯ ಸದಸ್ಯರಿಗೆ ತರಬೇತಿ ನೀಡಲು NDRF ತಂಡ ಆಗಮಿಸಿದೆ. ತರಬೇತಿಯಲ್ಲಿ ಕಲಿಯುವ ಕೌಶಲ್ಯಗಳನ್ನು ಕೇವಲ ವೈಯಕ್ತಿಕ ಜ್ಞಾನವಾಗಿ ಉಳಿಸದೆ, ಅಗತ್ಯ ಸಂದರ್ಭಗಳಲ್ಲಿ ಸಮಾಜದ ಜೀವ ರಕ್ಷಣೆಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿಕಟಪೂರ್ವ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ವಿಪತ್ತುಗಳು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಸಂಭವಿಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ವಿಪತ್ತು ನಿರ್ವಹಣೆಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. ಶೌರ್ಯ ತಂಡದ ಸದಸ್ಯರಿಗೆ ನೀಡಲಾಗುತ್ತಿರುವ ತರಬೇತಿ ಸಮಾಜಕ್ಕೆ ಅತ್ಯಂತ ಉಪಯುಕ್ತವಾಗಿದ್ದು, ಸದಸ್ಯರು ಶಿಸ್ತು, ಸೇವಾ ಮನೋಭಾವ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಪಟ್ಟಾಭಿರಾಮಚಂದ್ರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಶ್ ಪೈ ಅವರು ಮಾತನಾಡಿ, ದೇವಾಲಯ ಹಾಗೂ ಸಮಾಜದೊಂದಿಗೆ ಬೆಸೆದುಕೊಂಡಿರುವ ಇಂತಹ ಸೇವಾ ಚಟುವಟಿಕೆಗಳು ಜನರಲ್ಲಿ ಪರಸ್ಪರ ಸಹಕಾರ ಮತ್ತು ಸುರಕ್ಷತೆಯ ಮನೋಭಾವವನ್ನು ಬೆಳೆಸುತ್ತವೆ. ವಿಪತ್ತಿನ ಸಂದರ್ಭದಲ್ಲಿ ಯಾವುದೇ ಭೇದಭಾವವಿಲ್ಲದೆ ನೆರವಿಗೆ ಧಾವಿಸುವುದು ನಿಜವಾದ ಮಾನವೀಯ ಸೇವೆಯಾಗಿದ್ದು, ಶೌರ್ಯ ತಂಡದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಶೆಟ್ಟಿ ಅವರು ಮಾತನಾಡಿ, ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಾಗಿರುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳಿಗೂ ವೇದಿಕೆಯಾಗಬೇಕು. ಶೌರ್ಯ ತಂಡದ ಮೂಲಕ ಯುವಕರು ಹಾಗೂ ಸ್ವಯಂಸೇವಕರು ವಿಪತ್ತು ನಿರ್ವಹಣೆಯ ತರಬೇತಿ ಪಡೆದು ಸಮಾಜದ ರಕ್ಷಣೆಗೆ ಸಿದ್ಧರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತರಬೇತಿಯನ್ನು ಸಮರ್ಪಕವಾಗಿ ಪಡೆದು, ಅಗತ್ಯ ಸಂದರ್ಭಗಳಲ್ಲಿ ಜನರ ನೆರವಿಗೆ ನಿಲ್ಲಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಾಂತ ರಾಮ್ ಶೆಟ್ಟಿ ಅವರು ಮಾತನಾಡಿ, ಯಾವುದೇ ಉತ್ತಮ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ದೇವರ ಕೃಪೆಯೊಂದಿಗೆ ನಿರ್ದಿಷ್ಟ ಗುರಿ, ಮಾರ್ಗದರ್ಶನ ಮತ್ತು ಸಹಕಾರ ಅಗತ್ಯ. ಪೂಜ್ಯ ಖಾವಂದರು ಸಾಮಾಜಿಕ ಅಭಿವೃದ್ಧಿ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ಸಮಾಜಕ್ಕೆ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕವೂ ಪ್ರಮುಖವಾದುದು. ಕೇಂದ್ರ ಸರ್ಕಾರದ ಅಧೀನದಲ್ಲಿರುವ NDRF ಸಂಸ್ಥೆಯ ಪರಿಣತರಿಂದ ದೊರೆಯುತ್ತಿರುವ ಈ ತರಬೇತಿಯ ಸಂಪೂರ್ಣ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಯಾವುದೇ ವಿಪತ್ತಿನ ಸಂದರ್ಭದಲ್ಲಿ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಂಡು, ಇತರರ ಜೀವ ರಕ್ಷಣೆಗೆ ನೆರವಾಗುವಂತಹ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು ಆನ್‌ಲೈನ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ವಿಪತ್ತು ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ, ತರಬೇತಿ, ಶಿಸ್ತು ಮತ್ತು ತ್ವರಿತ ಸ್ಪಂದನೆ ಅತ್ಯಂತ ಮುಖ್ಯವಾಗಿವೆ ಎಂದು ತಿಳಿಸಿದರು. ಶೌರ್ಯ ತಂಡಗಳು ಸ್ಥಳೀಯ ಮಟ್ಟದಲ್ಲಿ ವಿಪತ್ತು ಸಂದರ್ಭಗಳಿಗೆ ಸಿದ್ಧವಾಗಿರುವ ಸ್ವಯಂಸೇವಕರ ಬಲಿಷ್ಠ ಜಾಲವಾಗಿ ರೂಪುಗೊಳ್ಳಬೇಕು. NDRF‌ನಂತಹ ಪರಿಣತ ಸಂಸ್ಥೆಯಿಂದ ದೊರೆಯುತ್ತಿರುವ ತರಬೇತಿಯನ್ನು ಸದಸ್ಯರು ಗಂಭೀರವಾಗಿ ಪಡೆದುಕೊಂಡು, ಸಮಾಜದ ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ಸೇವೆಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಬಾರ್ಕೂರು ವಲಯದ ಮೇಲ್ವಿಚಾರಕರಾದ ಶ್ರೀ ರವೀಂದ್ರ ಅವರು ನಿರೂಪಿಸಿದರು. ತಾಲೂಕು ಯೋಜನಾಧಿಕಾರಿ ಶ್ರೀ ರಮೇಶ್ ಪಿ.ಕೆ. ಅವರು ಸ್ವಾಗತಿಸಿದರು. ತಾಲೂಕು C.S.C. ನೋಡಲ್ ಅಧಿಕಾರಿ ಶ್ರೀ ಸಂದೀಪ್ ಅವರು ಧನ್ಯವಾದಗೈದರು.
ಕಾರ್ಯಕ್ರಮದಲ್ಲಿ ಶೌರ್ಯ ತಂಡದ ಕ್ಯಾಪ್ಟನ್‌ಗಳು, ಮಾಸ್ಟರ್‌ಗಳು, ತಾಲೂಕಿನ ಸೇವಾ ಪ್ರತಿನಿಧಿಗಳು, ಸಂಯೋಜಕರು, ಶೌರ್ಯ ಸದಸ್ಯರು, ಕಚೇರಿ ಸಿಬ್ಬಂದಿ, ಆಡಳಿತ ಪ್ರಬಂಧಕರು ಹಾಗೂ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ಶ್ರೀ ಉದಯ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ NDRF ಕಮಾಂಡೋಗಳು ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ರಕ್ಷಣಾ ವಿಧಾನಗಳು, ತುರ್ತು ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸುವ ಕ್ರಮಗಳು ಹಾಗೂ ವಿವಿಧ ವಿಪತ್ತು ನಿರ್ವಹಣಾ ಕೌಶಲ್ಯಗಳ ಕುರಿತು ಶೌರ್ಯ ಸದಸ್ಯರಿಗೆ ಪ್ರಾಯೋಗಿಕ ತರಬೇತಿ ನೀಡಿದರು. ತರಬೇತಿಯು ಸದಸ್ಯರಲ್ಲಿ ಆತ್ಮವಿಶ್ವಾಸ ಮತ್ತು ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now