ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆ. ಸೊಸೈಟಿಗೆ ₹1.25 ಕೋಟಿ ನಿವ್ವಳ ಲಾಭ, ವಾರ್ಷಿಕ ₹285 ಕೋಟಿ ವ್ಯವಹಾರ

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆ. ಸೊಸೈಟಿಗೆ ₹1.25 ಕೋಟಿ ನಿವ್ವಳ ಲಾಭ, ವಾರ್ಷಿಕ ₹285 ಕೋಟಿ ವ್ಯವಹಾರ
0Shares

ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿಗಳಲ್ಲಿ ಒಂದಾಗಿರುವ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ 2025 26 ನೇ ಸಾಲಿನ ವಾರ್ಷಿಕ ಮಹಾಸಭೆಯು ಇಂದು ನಗರದ ಮದರ್ ಆಫ್ ಸಾರೋಸ್ ಚರ್ಚಿನ ಸಭಾಂಗಣದಲ್ಲಿ ಜರುಗಿತು. ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. 2025–26ನೇ ಹಣಕಾಸು ವರ್ಷದಲ್ಲಿ ಸುಮಾರು ₹285 ಕೋಟಿ ಒಟ್ಟು ವ್ಯವಹಾರ ನಡೆಸಿದ್ದು, ₹1.25 ಕೋಟಿ ನಿವ್ವಳ ಲಾಭ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ ಎಂದು ಪ್ರಧಾನ ವ್ಯವಸ್ಥಾಪಕರು ಮಹಾಸಭೆಯಲ್ಲಿ ತಿಳಿಸಿದರು.

1997ರಲ್ಲಿ ಸ್ಥಾಪನೆಯಾದ ಈ ಸಹಕಾರ ಸಂಘವು ಸಹಕಾರ ಕ್ಷೇತ್ರದಲ್ಲಿ ಮೂರು ದಶಕಗಳ ಸೇವೆಯನ್ನು ಪೂರ್ಣಗೊಳಿಸುವ ಹೊಸ್ತಿಲಿನಲ್ಲಿದ್ದು, ತನ್ನ ಕಾರ್ಯವ್ಯಾಪ್ತಿಯನ್ನು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಿದೆ. ಪ್ರಸ್ತುತ ಉಡುಪಿ, ಮಲ್ಪೆ, ಉದ್ಯಾವರ, ಶಿರ್ವ ಹಾಗೂ ಹೂಡೆ–ಕೆಮ್ಮಣ್ಣುವಿನಲ್ಲಿ ಒಟ್ಟು ಐದು ಶಾಖೆಗಳ ಮೂಲಕ ಸದಸ್ಯರು ಹಾಗೂ ಗ್ರಾಹಕರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ.


ಸಂಘವು 8,187 ಸದಸ್ಯರನ್ನು ಹೊಂದಿದ್ದು, ₹1.20 ಕೋಟಿ ಪಾಲು ಬಂಡವಾಳ, ₹58.24 ಕೋಟಿ ಠೇವಣಿ, ₹49 ಕೋಟಿ ಹೊರಬಾಕಿ ಸಾಲ, ₹13.75 ಕೋಟಿ ಹೂಡಿಕೆ, ₹3.69 ಕೋಟಿ ನಿಧಿಗಳು ಹಾಗೂ ₹63.13 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಸಾಲ ವಸೂಲಾತಿಯಲ್ಲಿ 97 ಶೇಕಡಾ ಸಾಧನೆ ಮಾಡಿರುವ ಈ ಸಂಸ್ಥೆ, ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ‘ಎ’ ಶ್ರೇಣಿ ಪಡೆದುಕೊಂಡಿದೆ.
ತನ್ನ ಉನ್ನತ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತ ನಾಲ್ಕು ವರ್ಷಗಳ ಕಾಲ ಸಾಧನಾ ಪ್ರಶಸ್ತಿ ಪಡೆದುಕೊಂಡಿರುವ ಈ ಸಂಸ್ಥೆಯು, ಸಹಕಾರ ಕ್ಷೇತ್ರದಲ್ಲಿ ತನ್ನ ಉತ್ತಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ. ಸಾಮಾಜಿಕ ಹೊಣೆಗಾರಿಕೆಗೆ ಒತ್ತು ನೀಡುತ್ತಿರುವ ಸಂಘವು ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅನಾರೋಗ್ಯ ಪೀಡಿತರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ, ಜೊತೆಗೆ ಸಮಾಜಮುಖಿ ಕಾರ್ಯನಿರ್ವಹಿಸುವ ಸಂಘ–ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದೆ.
ಮುಂದಿನ ವರ್ಷದೊಳಗೆ ಸ್ವಂತ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಎರಡು ಹೊಸ ಶಾಖೆಗಳ ಆರಂಭ ಮಾಡುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದ್ದು, ಸದಸ್ಯರಿಗೆ ಇನ್ನಷ್ಟು ಆಧುನಿಕ ಹಾಗೂ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಅಧ್ಯಕ್ಷ ಲೂಯಿಸ್ ಲೋಬೊ ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಜೆ.ಆರ್ ಲೋಬೊ ಮತ್ತು ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದ ಮದರ್ ಆಫ್ ಸಾರೋಸ್ ಚರ್ಚಿನ ಧರ್ಮ ಗುರುಗಳಾದ ವO.ಫಾ. ಡೆನ್ನಿಸ್ ಡೆಸಾರವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ನಾಲ್ಕನೇ ಬಾರಿ ಎಸ್ಸಿಡಿಸಿಸಿ ಬ್ಯಾಂಕಿನಿಂದ ಪಡೆದ ‘ಸಾಧನ ಪ್ರಶಸ್ತಿ’ಯನ್ನು ಸೊಸೈಟಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸಿಇಓ ಹಾಗೂ ನಿರ್ದೇಶಕರುಗಳಿಗೆ ಮುಖ್ಯ ಅತಿಥಿಗಳು ಹಸ್ತಾಂತರಿಸಿದರು. 16 ಮಂದಿ ಅನಾರೋಗ್ಯ ಮತ್ತು ಅಶಕ್ತರಿಗೆ ಸಂಸ್ಥೆಯ ವತಿಯಿಂದ ಧನ ಸಹಾಯ ಮತ್ತು ಓಜೋನಮ್ ಹಾಗೂ ಮಾನಸ ಸಂಸ್ಥೆಗಳಿಗೆ ಧನಸಹಾಯ ಹಸ್ತಾಂತರಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಅಜ್ಮಲ್ ಅಸಾದಿ, ಗಣನಾಥ್ ಎಕ್ಕಾರ್ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸೊಸೈಟಿಯ ನಿರ್ದೇಶಕ ಡಾ. ನೇರಿ ಕರ್ನೇಲಿಯೋ ಸ್ವಾಗತಿಸಿದರೆ, ಪ್ರಧಾನ ವ್ಯವಸ್ಥಾಪಕ ಸಂದೀಪ್ ಫೆರ್ನಾಂಡಿಸ್ ವಾರ್ಷಿಕ ವರದಿ ವಾಚಿಸಿದರು. ವಿವಿಧ ಲೆಕ್ಕ ಪತ್ರಗಳನ್ನು, ವಿವಿಧ ನಿರ್ದೇಶಕರು ಸಭೆಯ ಮುಂದಿಟ್ಟರು. ಉಪಾಧ್ಯಕ್ಷ ಜೇಮ್ಸ್ ಡಿಸೋಜಾ ಧನ್ಯವಾದ ಸಮರ್ಪಿಸಿದರೆ, ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now