ಸೆ.8 ರಂದು ಕ್ರೈಸ್ತರ ಮೊಂತಿ ಹಬ್ಬಕ್ಕೆ ರಜೆ ನೀಡುವಂತೆ ಸಿಎಂ ಗೆ ಕಥೊಲಿಕ್ ಸಭಾ ಮನವಿ

ಸೆ.8 ರಂದು ಕ್ರೈಸ್ತರ ಮೊಂತಿ ಹಬ್ಬಕ್ಕೆ ರಜೆ ನೀಡುವಂತೆ ಸಿಎಂ ಗೆ ಕಥೊಲಿಕ್ ಸಭಾ ಮನವಿ
0Shares

ಉಡುಪಿ: ಸಪ್ಟೆಂಬರ್ 8 ರಂದು ಕ್ರೈಸ್ತ ಸಮುದಾಯದವರು

ಆಚರಿಸುವ ದೇವಾಮಾತೆ ಕನ್ಯಾಮರಿಯಮ್ಮ ಜನ್ಮದಿನವಾಗಿದ್ದು, ಈ ದಿನವನ್ನು ಕರಾವಳಿ ಭಾಗದ ಕ್ರೈಸ್ತ ಬಾಂಧ್ಯರವರು ತೆನೆ ಹಬ್ಬ ಆಚರಿಸುವ ಸಂದರ್ಭದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ಕಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶದ ಪದಾಧಿಕಾರಿಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ಈ ಭಾಗದ ಕ್ರೈಸ್ತ ಕೃಷಿಕರು ಆಗಿದ್ದು ರೈತರು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ, ದೇವಾಲಯಗಳಲ್ಲಿ ಪೂಜಾವಿಧಿಗಳನ್ನು ನೆರವೇರಿಸಿ, ಕುಟುಂಬದ ಸಹಭೋಜನದೊಂದಿಗೆ ಸಂಭ್ರಮ ಆಚರಣೆ ಮಾಡುತ್ತಾರೆ. ಈ ಹಬ್ಬವನ್ನು ಕುರಲ್ ಪರ್ಬ “ಕುಟುಂಬದ ಹಬ್ಬ” ಎಂದು ಕರೆಯುತ್ತಿದ್ದು ಈ ಹಬ್ಬವು ಪ್ರತಿ ವರ್ಷ ಸೆಪ್ಟೆಂಬರ್ 8 ರಂದೆ ಆಚರಿಸಲಾಗುತ್ತಿದೆ

ಇತ್ತೀಚಿನ ಕೆಲವು ವರ್ಷಗಳಿಂದ ಈ ಹಬ್ಬಕ್ಕೆ ರಾಜ್ಯ ಸರ್ಕಾರವು ನಿರ್ಬಂಧಿತ ರಜೆ (R.H)ಎಂದು ಪರಿಗಣಿಸಿದೆ. ಇದು ಕೇವಲ ಶಿಕ್ಷಕರಿಗೆ ಮಾತ್ರ ಸೀಮಿತವಾಗಿದೆ. ಆದರೆ ಕರಾವಳಿ ಭಾಗದಲ್ಲಿ ಈ ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸುತ್ತಿದ್ದು, ನಾಡಹಬ್ಬ ರೀತಿಯಲ್ಲಿ ಆಚರಿಸಲಾಗುತ್ತದೆ. ಸುಮಾರು 8 ದಿನಗಳ ಕಾಲ “ನೋವೆನಾ ವಿಶೇಷ ಪೂಜೆ” ನಡೆಸಿ ಮರಿಯಮ್ಮ ಮಾತೆಗೆ ತೋಟದ ಹೂ ಗಳನ್ನು ಅಪರ್ಣೆ ಮಾಡಿ ಈ ಹಬ್ಬದ ವಿಶೇಷತೆಯ ಕಬ್ಬುಗಳನ್ನು ವಿತರಿಸುವುದು ವಿಶೇಷವಾಗಿರುತ್ತದೆ.

ದಿನಾಂಕ 8 ರಂದು ಮಂಗಳೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಧರ್ಮ ಪ್ರಾಂತ್ಯದಗಳಲ್ಲಿ ವಿವಿಧ ಪೂಜಾ ವಿಧಿಗಳು ನಡೆಯುತ್ತಿದ್ದು ಕರ್ನಾಟಕ ರಾಜ್ಯ ಸಪ್ಟೆಂಬರ್ 8 ರಂದು ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಬೇಕೆಂದು ಈಗಾಗಲೇ ಕ್ರೈಸ್ತ ಸಮುದಾಯದ ಕ್ಯಾಥೋಲಿಕ್ ಸಭಾ ಮತ್ತು ಇತರೆ ಸಂಘಟನೆಗಳು ರಾಜ್ಯದ ಮುಖ್ಯಮಂತ್ರಿರವರಿಗೆ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ. ಒಂದು ವೇಳೆ ರಾಜ್ಯಾದ್ಯಂತ ರಜೆ ನೀಡಲು ಅಸಾಧ್ಯವಾದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಕ್ರೈಸ್ತ ಸಮುದಾಯದವರ ಬೇಡಿಕೆಯಾಗಿರುತ್ತದೆ. ಆದುದರಿಂದ ಸಪ್ಟೆಂಬರ್ 8 ರಂದು ಸರ್ಕಾರಿ ರಜೆಯನ್ನಾಗಿ ಘೋಷಣೆ ಮಾಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿಯ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವುದಾಗಿ ಮತ್ತು ಸಂಬ೦ಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೂಡ ಮನವಿ ನೀಡುವಂತೆ ಸೂಚಿಸಿದರು.

ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಅಧ್ಯಕ್ಷರಾದ ಸಂತೋಷ್ ಡಿಸೋಜಾ, ರಾಜಕೀಯ ಸಂಚಾಲಕರಾದ ಸ್ಪ್ಯಾನಿ ಲೋಬೊ, ಉಡುಪಿ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ಶಿರ್ವ, ಉಡುಪಿ ವಲಯ ಅಧ್ಯಕ್ಷ ಕಿರಣ್ ಲೂವಿಸ್ ಹಾಗೂ ಇತರರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now