ರಾಷ್ಟ್ರಪತಿಯವರಿಂದ ಪ್ರತಿಷ್ಠಿತ ಪ್ರಶಸ್ತಿ ಪಡೆದ ಶಿರಸಿಯ ಅಕ್ಷಯ್ ಮಶೆಲ್ಕರ್‌

ರಾಷ್ಟ್ರಪತಿಯವರಿಂದ ಪ್ರತಿಷ್ಠಿತ ಪ್ರಶಸ್ತಿ ಪಡೆದ ಶಿರಸಿಯ ಅಕ್ಷಯ್ ಮಶೆಲ್ಕರ್‌
0Shares

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವ ವಿಜ್ಞಾನಿ ಹಾಗೂ Experimind Labs Pvt. Ltd. ಸಂಸ್ಥೆಯ ಸಂಸ್ಥಾಪಕರಾದ ಅಕ್ಷಯ್ ಜೈವಂತ್ ಮಶೆಲ್ಕರ್ ಅವರಿಗೆ ನೀತಿ ಆಯೋಗದ ಅಟಲ್ ಇನೋವೇಶನ್ ಮಿಷನ್ (AIM) ವತಿಯಿಂದ ಪ್ರದಾನವಾಗುವ ಪ್ರತಿಷ್ಠಿತ “Grassroots Innovator Recognition – 2026” ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ್ಯ ರಾಷ್ಟ್ರಪತಿಯವರು ಅಕ್ಷಯ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ರಾಷ್ಟ್ರಪತಿಯವರು ಸುಮಾರು ಐದು ನಿಮಿಷಗಳ ಕಾಲ ಅಕ್ಷಯ್ ಅವರ ಸಂಶೋಧನೆ, ಆವಿಷ್ಕಾರಗಳು ಹಾಗೂ ಭವಿಷ್ಯದ ಕಾರ್ಯಯೋಜನೆಗಳ ಕುರಿತು ಆತ್ಮೀಯವಾಗಿ ಚರ್ಚೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿನ ನವೀನ ಸಂಶೋಧನೆ ಹಾಗೂ ಕೊಡುಗೆಗಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಅಕ್ಷಯ್ ಅವರಿಗೆ “Innovation Flame” ಫಲಕ ನೀಡಿ ಗೌರವಿಸಿದರು. ದೇಶದಾದ್ಯಂತ ಆಯ್ಕೆಯಾದ 26 ಗ್ರಾಸ್‌ರೂಟ್ಸ್ ಇನೋವೇಟರ್‌ಗಳಲ್ಲಿ ಅಕ್ಷಯ್ ಕೂಡ ಒಬ್ಬರಾಗಿದ್ದಾರೆ.

ಪ್ರಸ್ತುತ ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ. ವ್ಯಾಸಂಗ ಮಾಡುತ್ತಿರುವ ಅಕ್ಷಯ್ ಮಶೆಲ್ಕರ್ ಅವರು ಶಿರಸಿಯ ನಿವೃತ್ತ ಶಿಕ್ಷಕಿ ಲತಾ ಭಂಡಾರಿ ಹಾಗೂ ದಿವಂಗತ ಜಯವಂತ್ ಮಶೆಲ್ಕರ್ ಅವರ ಪುತ್ರ. ಅವರು ಅಭಿವೃದ್ಧಿಪಡಿಸಿರುವ ‘Geomagic’ ಗಣಿತ ಶಿಕ್ಷಣ ಸಂಶೋಧನೆಗೆ ಈಗಾಗಲೇ ನಾಲ್ಕು ಪೇಟೆಂಟ್‌ಗಳು ಲಭಿಸಿವೆ.

ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳಲ್ಲಿ AI ಆಧಾರಿತ STEM ಪ್ರಯೋಗಾಲಯಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ತಲುಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೂ ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್ ಹಾಗೂ ಆಧುನಿಕ ವಿಜ್ಞಾನ ಶಿಕ್ಷಣ ತಲುಪಬೇಕು ಎಂಬ ಧ್ಯೇಯದೊಂದಿಗೆ ಹಲವು ಸರ್ಕಾರಿ ಶಾಲೆಗಳಲ್ಲಿ AI ಪ್ರಯೋಗಾಲಯಗಳ ಸ್ಥಾಪನೆಗೆ ಅವರು ಶ್ರಮಿಸುತ್ತಿದ್ದಾರೆ.

ಅಕ್ಷಯ್ ಮಶೆಲ್ಕರ್ ಅವರ ಈ ಸಾಧನೆ ಉತ್ತರ ಕನ್ನಡ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದ್ದು, ಯುವ ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಉದ್ಯಮಶೀಲರಿಗೆ ಸ್ಫೂರ್ತಿದಾಯಕವಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now