
ಉಡುಪಿ, ಆ. 3: ಕರ್ನಾಟಕದಾದ್ಯಂತ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಎಂಸಿಸಿ ಬ್ಯಾಂಕ್ ತನ್ನ 23ನೇ ಶಾಖೆಯನ್ನು ಕಟಪಾಡಿಯಲ್ಲಿ ಆರಂಭಿಸಿದೆ. ಕಟಪಾಡಿಯ ಮೂಡಬೆಟ್ಟು, ಹಳೆಯ ಅಂಚೆ ಕಚೇರಿ ರಸ್ತೆಯ ಗ್ಲೋಬಲ್ ರೆಸಿಡೆನ್ಸಿ ಕಟ್ಟಡದ ನೆಲ ಮಹಡಿಯಲ್ಲಿ ನೂತನ ಶಾಖೆ ಕಾರ್ಯಾರಂಭ ಮಾಡಿದೆ.
ಡಾ. ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಅಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ಶಾಖೆಯನ್ನು ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಅವರು ಸೇಫ್ ರೂಂ ಉದ್ಘಾಟಿಸಿದರು. ಕಟಪಾಡಿಯ ಸಂತ ವಿನ್ಸೆಂಟ್ ಡಿ ಪಾಲ್ ಚರ್ಚ್ನ ಧರ್ಮಗುರು ಫಾ. ರಾಜೇಶ್ ಪ್ರಸನ್ನ ದೀಪ ಬೆಳಗಿಸಿ ನೂತನ ಶಾಖೆಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಂ.ಎ. ಗಫೂರ್ ಭಾಗವಹಿಸಿದ್ದರು. ಸಿಎಸ್ಐ ಕ್ರೈಸ್ಟ್ ಚರ್ಚ್ನ ಪ್ರೆಸ್ಪಿಟರ್ ಫಾ. ಅಕ್ಷಯ್ ಡಿ. ಅಮ್ಮಣ್ಣ, ಕರ್ನಾಟಕ ಕ್ರಿಶ್ಚಿಯನ್ ಸಹಕಾರ ಸಾಲ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತಣ್ಣ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಎಸ್ವಿಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ. ಸತ್ಯೇಂದ್ರ ಪೈ, ಚಾರ್ಟಡ್್ರ ಅಕೌಂಟೆಂಟ್ ಸಿಎ ಪ್ರೀತೇಶ್ ಬರ್ಟನ್ ಡೆಸಾ, ಉಡುಪಿ ಜಿಲ್ಲಾ ಮುಸ್ಲಿಂ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವಾ ಹಾಗೂ ಮಹಾಪ್ರಬಂಧಕ ಸುನಿಲ್ ಮೆನೆಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
500 ಕೋಟಿಯಿಂದ ₹1,600 ಕೋಟಿಗೆ ವ್ಯವಹಾರ
ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊ ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್ನ ಒಟ್ಟು ವ್ಯವಹಾರವು ₹500 ಕೋಟಿಯಿಂದ ₹1,600 ಕೋಟಿಗೂ ಅಧಿಕ ಮಟ್ಟಕ್ಕೆ ಏರಿಕೆಯಾಗಿ ಮೂರು ಪಟ್ಟು ಬೆಳವಣಿಗೆ ಸಾಧಿಸಿದೆ ಎಂದು ತಿಳಿಸಿದರು.
“ಮಾನವೀಯ ಸ್ಪರ್ಶದೊಂದಿಗೆ ನಗುಮೊಗದ ಸೇವೆ” ಎಂಬ ಧೈಯದೊಂದಿಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ವಿಶ್ವಾಸವೇ ಈ ಸಾಧನೆಯ ಮೂಲವಾಗಿದೆ ಎಂದು ಹೇಳಿದರು.
ಆರು ತಿಂಗಳಲ್ಲಿ ₹10 ಕೋಟಿ ವ್ಯವಹಾರದ ಗುರಿ
ಕಟಪಾಡಿ ಶಾಖೆಯು ಕೇವಲ ಆರು ತಿಂಗಳಲ್ಲೇ ₹10 ಕೋಟಿ ವ್ಯವಹಾರ ತಲುಪುವ ವಿಶ್ವಾಸವಿದೆ ಎಂದು ಅನಿಲ್ ಲೋಬೊ ಹೇಳಿದರು. ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ಆರಂಭಿಸಿರುವ ಆರು ಹೊಸ ಶಾಖೆಗಳ ಪೈಕಿ ದೇರಳಕಟ್ಟೆ ಹೊರತುಪಡಿಸಿ ಉಳಿದ ಐದು ಶಾಖೆಗಳು ಮೊದಲ ವರ್ಷದಲ್ಲೇ ₹10 ಕೋಟಿ ವ್ಯವಹಾರ ಸಾಧಿಸಿರುವುದಾಗಿ ಅವರು ತಿಳಿಸಿದರು.
ಬ್ಯಾಂಕ್ನಲ್ಲಿ ಪಾರದರ್ಶಕ ಆಡಳಿತ, ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆ ಹಾಗೂ ಎನ್ಆರ್ಐ ಬ್ಯಾಂಕಿಂಗ್ ಸೇವೆಗಳ ಮರುಪ್ರಾರಂಭದಂತಹ ಕ್ರಮಗಳು ಬ್ಯಾಂಕ್ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ ಎಂದರು.

ಮುಖ್ಯ ಅತಿಥಿ ಎಂ.ಎ. ಗಫೂರ್ ಮಾತನಾಡಿ, ಸಹಕಾರ ಚಳವಳಿಯ ಆಶಯಗಳನ್ನು ಎಂಸಿಸಿ ಬ್ಯಾಂಕ್ ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಪ್ರಾಮಾಣಿಕ ಹಾಗೂ ಜನಸ್ನೇಹಿ ಸೇವೆಯ ಮೂಲಕ ಸಾವಿರಾರು ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಶ್ಲಾಘಿಸಿದರು.
ಫಾ. ರಾಜೇಶ್ ಪ್ರಸನ್ನ ಮಾತನಾಡಿ, “ಎಂಸಿಸಿ ಬ್ಯಾಂಕ್ ನಮ್ಮೆಲ್ಲರ ಬ್ಯಾಂಕ್” ಎಂದು ಬಣ್ಣಿಸಿ, ಗ್ರಾಹಕ ಸ್ನೇಹಿ ಸೇವೆಯಿಂದ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಸಿಎ ಪ್ರೀತೇಶ್ ಡೆಸಾ, ಫಾ. ಅಕ್ಷಯ್ ಡಿ. ಅಮ್ಮಣ್ಣ, ಪ್ರಶಾಂತ್ ಜತ್ತಣ್ಣ, ಗೀತಾಂಜಲಿ ಎಂ. ಸುವರ್ಣ ಹಾಗೂ ಕೆ. ಸತ್ಯೇಂದ್ರ ಪೈ ಅವರು ಬ್ಯಾಂಕ್ನ ಶಿಸ್ತು, ಪಾರದರ್ಶಕತೆ, ಸಮಾಜಮುಖಿ ಚಟುವಟಿಕೆಗಳು ಹಾಗೂ ಸೇವಾ ಮನೋಭಾವವನ್ನು ಪ್ರಶಂಸಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೂತನ ಶಾಖೆಯ ಉದ್ಘಾಟನೆಗೆ ಶುಭಾಶಯ ಕೋರಿದ್ದು, ಕಟಪಾಡಿ ಭಾಗದ ಜನರಿಗೆ ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ಒದಗಿಸುವ ಮೂಲಕ ಈ ಶಾಖೆ ಎಂಸಿಸಿ ಬ್ಯಾಂಕ್ನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕರು, ರಾಂಕ್ ವಿಜೇತರು, ಸಮಾಜಸೇವಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಕಟಪಾಡಿಯ ರವಿ ಕೆ. ಅವರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಉದ್ಘಾಟನಾ ದಿನ ಹೊಸ ಖಾತೆ ತೆರೆದ ಗ್ರಾಹಕರು ಹಾಗೂ ಶಾಖೆಯ ಆರಂಭಕ್ಕೆ ಸಹಕರಿಸಿದ ಗಣ್ಯರನ್ನು ಸಹ ಗೌರವಿಸಲಾಯಿತು.

ಬ್ಯಾಂಕ್ ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಡೇವಿಡ್ ಡಿಸೋಜಾ, ಜೆ.ಪಿ.ರೊಡ್ರಿಗಸ್, ಹೆರಾಲ್ಡ್ ಮೊಂತೆರೊ, ಎಲ್ಲೋಯ್ ಕಿರಣ್ ಕ್ರಾಸ್ಟೊ, ಐರಿನ್ ರೆಬೆಲ್ಲೊ, ವಿನ್ಸೆಂಟ್ ಲಸ್ರಾದೋ, ಆಂಡ್ರಾ ಡಿಸೋಜಾ, ರೋಶನ್ ಡಿಸೋಜಾ, ಫೆಲಿಕ್ಸ್ ಡಿಕ್ರೂಜ್, ಸುಶಾಂತ್ ಸಲ್ಡಾನ್ಹಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now