ನಿವೃತ್ತ ಬ್ಯಾಂಕ್ ಉದ್ಯೋಗಿಗೆ ₹22ಲಕ್ಷ ವಂಚನೆ-ವೀಡಿಯೋ ಕಾಲ್ ಮೂಲಕ ಬೆದರಿಸಿ ಹಣ ವರ್ಗಾವಣೆ ಮಾಡಿಸಿಕೊಂಡ ಆರೋಪಿಗಳು

ನಿವೃತ್ತ ಬ್ಯಾಂಕ್ ಉದ್ಯೋಗಿಗೆ ₹22ಲಕ್ಷ ವಂಚನೆ-ವೀಡಿಯೋ ಕಾಲ್ ಮೂಲಕ ಬೆದರಿಸಿ ಹಣ ವರ್ಗಾವಣೆ ಮಾಡಿಸಿಕೊಂಡ ಆರೋಪಿಗಳು
0Shares

ಉಡುಪಿ, ಜು. 17: ಸೈಬರ್ ಕ್ರೈಂ, ಇ.ಡಿ. ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಂದ ₹22 ಲಕ್ಷ ಹಣವನ್ನು ಆರ್‌ಟಿಜಿಎಸ್ (RTGS) ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಉಡುಪಿ ತಾಲೂಕಿನ ನಿವಾಸಿ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಜಯಕರ ಕಾಮತ್ ಪಿ. (76) ಅವರು ಈ ಕುರಿತು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಜುಲೈ 10ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ವೀಡಿಯೋ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ತಾನು ಮುಂಬೈನ ಕೊಲಬಾ ಸೈಬರ್ ಕ್ರೈಂ ವಿಭಾಗದಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ.

ಬಳಿಕ, ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ಜಯಕರ ಕಾಮತ್ ಅವರ ಹೆಸರಿನಲ್ಲಿ ಖಾತೆಯಿದ್ದು, ಅದರಿಂದ ನೂರಾರು ಕೋಟಿ ರೂಪಾಯಿ ಹಣ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣದಲ್ಲಿ ಬಳಕೆಯಾಗಿದೆ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಹಾಗೂ ಎಟಿಎಂ ಕಾರ್ಡ್ ವಿವರಗಳನ್ನೂ ಕೇಳಿಕೊಂಡಿದ್ದಾನೆ.

ಜುಲೈ 11ರಿಂದ 16ರವರೆಗೆ ಒಂದೇ ಮೊಬೈಲ್ ಸಂಖ್ಯೆಯಿಂದ ಪದೇ ಪದೇ ವಾಟ್ಸಾಪ್ ಕರೆ ಮಾಡಿ, ತಾವು ವಿಶ್ವಾಸ್ ಎಡಿಜಿಪಿ, ಅನಿಲ್ ಕುಮಾರ್, ಇ.ಡಿ. ಅಧಿಕಾರಿ ಹಾಗೂ ಸೈಬರ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಆರೋಪಿಗಳು, “ಫಂಡ್ ವೆರಿಫಿಕೇಶನ್” ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸೂಚಿಸಿದ ಖಾತೆಗೆ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಹೆಸರಿನಲ್ಲಿ ಬೆದರಿಕೆ ಹಾಕಿ ನಂಬಿಕೆ ಗಳಿಸಿದ ಆರೋಪಿಗಳು ಒಟ್ಟು ₹22 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 29/2026 ದಾಖಲಿಸಲಾಗಿದ್ದು, ಐಟಿ ಕಾಯ್ದೆಯ ಕಲಂ 66(D) ಹಾಗೂ ಬಿಎನ್‌ಎಸ್‌ನ ಕಲಂ 114(4), 319(2), 308(2) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸೈಬರ್ ಪೊಲೀಸರ ಎಚ್ಚರಿಕೆ: ಸರ್ಕಾರಿ ತನಿಖಾ ಸಂಸ್ಥೆಗಳು, ಸೈಬರ್ ಕ್ರೈಂ, ಇ.ಡಿ., ಸಿಬಿಐ

ಅಥವಾ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ವೀಡಿಯೋ ಕರೆ ಮಾಡಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಯಾವುದೇ ಸೂಚನೆ ನೀಡುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ, ತಕ್ಷಣ 1930 ಸಹಾಯವಾಣಿ ಅಥವಾ ಸಮೀಪದ ಸೈಬರ್ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now